ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ರಂಗೇರುತ್ತಿದೆ. ಈ ಮಧ್ಯೆ ವಿಧಾನಸಭೆ ಚುನಾವಣೆಗೂ ಈಗಿನಿಂದಲೇ ಫೈಟ್ ಶುರುವಾಗಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಶಿಷ್ಯರಿಬ್ಬರೂ ಈಗಿನಿಂದಲೇ ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟು, ಕಿತ್ತಾಟ ಶುರು ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಹಾಗೂ ಡಿ ಕೆ ಶಿವಕುಮಾರ್ ಅವರ ಕಟ್ಟಾ ಶಿಷ್ಯ ಎನಿಸಿಕೊಂಡಿರುವ ಪರಿಷತ್‌ನ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ. ಈಗಾಗಲೇ ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿದ್ದ ಸಂತೋಷ್ ಲಾಡ್ ಎರಡು ಬಾರಿ ಗೆದ್ದಿದ್ದರು.
ಅಷ್ಟೇ ಅಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ಆಗಿದ್ದರು. ಆದರೆ, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಸದ್ಯ ಇನ್ನೊಮ್ಮೆ ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ, ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ ಸಹ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿರುವುದು ಲಾಡ್ಗೆ ಇರುಸುಮುರುಸು ತಂದಿಟ್ಟಿದೆ.
ಟಿಕೆಟ್ ನನಗೇ ಕೊಡಬೇಕು ಅಂತಾರೆ ಛಬ್ಬಿ : ಸಂತೋಷ ಲಾಡ್ ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿದರು. 2 ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದರೂ ಸಹ ಕ್ಷೇತ್ರದಿಂದ ದೂರವುಳಿದಿದ್ದಾರೆ ಅಂತಾ ಆರೋಪಿಸ್ತಿದ್ದಾರೆ ನಾಗರಾಜ್ ಛಬ್ಬಿ. ಅಲ್ಲದೇ ಸಂತೋಷ ಲಾಡ್ ಕಲಘಟಗಿಯಿಂದ ಮೊದಲ ಭಾರಿ ಸ್ಪರ್ಧೆ ಮಾಡುವ ವೇಳೆ ತಾನು ಕ್ಷೇತ್ರ ಬಿಟ್ಟುಕೊಟ್ಟಿದ್ದೆ. ಇದೀಗ ಮರಳಿ ಆ ಕ್ಷೇತ್ರವನ್ನು ತನಗೆ ಬಿಟ್ಟು ಕೊಡಬೇಕು ಅಂತಿದ್ದಾರೆ ನಾಗರಾಜ ಛಬ್ಬಿ.
ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಕಾಲಾವಕಾಶ ಇದೆ. ಈ ನಡುವೆ ಇಬ್ಬರು ನಾಯಕರ ಮುಸುಕಿನ ಗುದ್ದಾಟ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನ ಕಾಯ್ದು ನೋಡಬೇಕಿದೆ.