ಹುಬ್ಬಳ್ಳಿ: ಭಾರತದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ರೋಹಿತ್ ಶರ್ಮಾ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಇದೇ ಅ. 25 ರಂದು ಆಗಮಿಸಲಿದ್ದಾರೆ.
ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕ್ರಿಕ್ ಕಿಂಗ್ಡಂ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ತರಬೇತಿ ಕ್ರೀಡಾಂಗಣವನ್ನು ರೋಹಿತ್ ಶರ್ಮಾ ಉದ್ಘಾಟನೆ ಮಾಡಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ವೀರೇಶ ಉಂಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರೋಹಿತ್ ಶರ್ಮಾ ಅವರು ನಗರದ ಹೊಸ ಕೋರ್ಟ್ ನ್ಯಾಯಾಲಯದ ಪಕ್ಕದಲ್ಲಿರುವ ಬಿಎಸ್ ಕಲ್ಲೂರು ಲೇಔಟ್ನಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಮಕ್ಕಳೊಂದಿಗೆ ಕಾಲ ಕಳೆಯಲಿದ್ದಾರೆ. ಇದಾದ ಬಳಿಕ ಕಿರಿಯಾಡ್ ಪ್ರೆಸ್ಟೀಜ್ ಹೋಟೆಲ್ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಶರ್ಮಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.