ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟು ಸೇರಿದಂತೆ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸದ್ಯ ಜಿಲ್ಲಾಡಳಿತ ಹೋಟೆಲ್ ಹಾಗೂ ಬಾರ್ಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್ಗೆ ಅವಕಾಶ ನೀಡಿದೆ. ಅದರಂತೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಧಾರವಾಡ ಚಿಕನ್ ವ್ಯಾಪಾರ ಸಂಘದ ಕಾರ್ಯದರ್ಶಿ ರವಿ ಪಟ್ಟಣ್ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ, ಜಿಲ್ಲಾಡಳಿತ ಬಾರ್ ಹಾಗೂ ಹೋಟೆಲ್ಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್ಗೆ ಅವಕಾಶ ಕಲ್ಪಿಸಿದೆ. ಮಾಂಸ ಮತ್ತು ಮೊಟ್ಟೆಯಲ್ಲಿ ವಿಟಮಿನ್ ಜಾಸ್ತಿ ಇರುವುದರಿಂದ ಕೊರೊನಾ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ.
ಆದ್ದರಿಂದ ಹಸಿ ಮಾಂಸ ಮತ್ತು ಮೊಟ್ಟೆ ಮಾರಾಟಕ್ಕೆ ಮುಂಜಾನೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಬೇಕು. ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ರೆ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡಿದವರಿಗೆ ಬಹಳಷ್ಟು ಅನುಕೂಲವಾಗಲಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಮಾಂಸ ಮಾರಾಟ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ಗೆ ಮನವಿ ಮಾಡಿದರು.
ಇದನ್ನೂ ಓದಿ: ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ: 7 ಮಂದಿ ಸಾವು, ಹಲವರ ಸ್ಥಿತಿ ಗಂಭೀರ