ಧಾರವಾಡ: ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಸಿದ್ದರಾಮಯ್ಯ ಓದಿ ನೋಡಲಿ. ಸಾವರ್ಕರ್ ಬಗ್ಗೆ ಸತ್ಯ ಸಂಗತಿ ಗೊತ್ತಾದರೆ ಭಾರತ ಮಾತೆಗೆ ಅವಮಾನ ಮಾಡುವ ಕೆಲಸವನ್ನು ಅವರು ಮಾಡುವುದಿಲ್ಲ. ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯಗೆ ಪುಸ್ತಕ ಕೊಡುವುದಾಗಿ ಹೇಳಿದ್ದೆ. ಕೆಲಸದ ಒತ್ತಡದಿಂದ ಪುಸ್ತಕ ಕೊಡಲು ಆಗಿಲ್ಲ. ಹಾಗಾಗಿ ನಾನೇ ಹೋಗಿ ಭೇಟಿಯಾಗಿ ಪುಸ್ತಕಕೊಟ್ಟು ಮಾತನಾಡುವೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಥೂರಾಮ್ ಗೋಡ್ಸೆ ಗಾಂಧಿ ದೇಹಕ್ಕೆ ಮಾತ್ರ ಗುಂಡು ಹಾಕಿದ. ಮಹಾತ್ಮ ಗಾಂಧಿ ತತ್ವವನ್ನ ಜನಮಾನಸದಿಂದ ದೂರ ಮಾಡಿದವರು ಯಾರು ಅಂತಾ ಚರ್ಚೆಯಾಗಬೇಕು. ಗಾಂಧಿ ಹೆಸರಿಟ್ಟುಕೊಂಡಿರುವ ಕಾಂಗ್ರೆಸ್ ನಿಜವಾಗಿಯೂ ಗಾಂಧೀಜಿ ತತ್ವದ ವಾರಸುದಾರರಾ? ಎಂದು ಪ್ರಶ್ನಿಸಿದರು. ಅಲ್ಲದೇ, ನಾನು ನನ್ನ ಇಲಾಖೆಗಳ ಅಧ್ಯಯನ ಪ್ರವಾಸ ಮಾಡಲು ಓಡಾಡುತ್ತಿದ್ದೇನೆ. ನನ್ನ ಇಲಾಖೆಯ ಡಿಎನ್‌ಎ ಏನಿದೆ ಅಂತಾ ನೋಡೋಕೆ ಬಂದಿದ್ದೇನೆ ಹೊರತು ಕಾಂಗ್ರೆಸ್ ಡಿಎನ್‌ಎ ನೋಡೋಕೆ ಅಲ್ಲ ಎಂದರು.
ಇನ್ನು ಮಹಾರಾಷ್ಟ್ರ, ಹರಿಯಾಣ ಚುನಾವಣೆ ವಿಚಾರ ಕುರಿತು ಮಾತನಾಡಿದ ಸಿ ಟಿ ರವಿ, ಸೋಲುತ್ತೇವೆ ಅಂತಾ ಗೊತ್ತಾಗಿಯೇ ಮುಂಚಿತವಾಗಿ ಕಾಂಗ್ರೆಸ್ನವರು ಇವಿಎಂ ಮೇಲೆ ಬೆರಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ ಅಂತಾರೆ. ಇವರು ಸೋತ ತಕ್ಷಣ ಇವಿಎಂನಲ್ಲಿ ಲೋಪ ಅಂತಾರೆ. ಗಾಂಧೀಜಿ ಕಾಂಗ್ರೆಸ್ ವಿಸರ್ಜನೆ ಮಾಡಿ ಅಂದಿದ್ರು. ಅದನ್ನು ಈಗ ಜನರೇ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.