ಹುಬ್ಬಳ್ಳಿ : ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಬಡ ಯುವಕನೊಬ್ಬ ಇದೇ ಪರೀಕ್ಷೆಯಲ್ಲಿ ದೇಶಕ್ಕೆ 17ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ವಾಣಿಜ್ಯ ನಗರಿಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.
ವಿದ್ಯಾನಗರದ ಬೃಂದಾವನ ಕಾಲೋನಿಯ ನಿವಾಸಿ ರಾಹುಲ್ ಸಂಕನೂರು ಈ ಸಾಧನೆ ಮಾಡಿದವರು. ರಾಹುಲ್‌ಗೆ ಹೂಗುಚ್ಛ ನೀಡಿ, ಸಿಹಿ ತಿನಿಸುವ ಮೂಲಕ ಕುಟುಂಬಸ್ಥರು, ಸ್ನೇಹಿತರು ಸಂತಸ ವ್ಯಕ್ತಪಡಿಸಿ, ಶುಭಕೋರಿದ್ದಾರೆ.
ಇಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದ ರಾಹುಲ್ ಸಂಕನೂರು 3ನೇ ಪ್ರಯತ್ನದಲ್ಲಿ 17 ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ರಾಹುಲ್, ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಪರೀಕ್ಷೆ ಪಾಸು ಮಾಡಿದ್ದೇನೆ. 17 ನೇ ರ‍್ಯಾಂಕ್ ಬಂದಿದ್ದಕ್ಕೆ ಖುಷಿಯಾಗಿದೆ. ನಿರೀಕ್ಷೆಗೂ ಮೀರಿದ ಫಲಿತಾಂಶ ಖುಷಿ ತಂದಿದೆ. ಕುಟುಂಬದವರು, ಶಿಕ್ಷಕರು, ಹಾಗೂ ಗೈಡ್ ಸಹಕಾರದಿಂದ ಈ ಸಾಧನೆ ಮಾಡಿದ್ದೇನೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.