ಧಾರವಾಡ: ಕರ್ನಾಟಕ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಹೊರಡಿಸಿದ ಆದೇಶ ರದ್ದುಪಡಿಸಲು ಆಗ್ರಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸಂಘದ ಅಧ್ಯಕ್ಷ ನಾಡೋಜ ಪಾಟೀಲ್ ಪುಟ್ಟಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡ್ಗೆ ಹೋಗ್ಲಿ, ಇಲ್ಲಿ ಕನ್ನಡ ಬೇಕು ಅನ್ನೋರಿಗೆ ಮಾತ್ರ ಸ್ಥಳವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರ್ತಾರೆ. ಯಾರಿಗೆ ಬೇಡವಾಗಿದೆ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡ್ಗೆ ಹೋಗಲಿ, ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ, ಸರ್ಕಾರದ ಇಂಗ್ಲಿಷ್ ಮಾಧ್ಯಮ ನೀತಿ ವಿರೋಧಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.