ಧಾರವಾಡ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾದ ಯುವಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಧಾರವಾಡದ ನಾಯ್ಕ ಅಡ್ಡಾ ಸರ್ಕಲ್ ಬಳಿ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾವಣೆಗೊಂಡ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಆದರೆ, ಡಿಸಿ ಮನವಿಗೆ ಬಗ್ಗದ ಯುವಕರು ಕಲಾಭವನ ಮೈದಾನಕ್ಕೆ ತೆರಳೋದಾಗಿ ಪಟ್ಟು ಹಿಡಿದರು. ಈ ವೇಳೆ, ಪೊಲೀಸರು ಮತ್ತು ಯುವಕರ ಮಧ್ಯೆ ವಾಗ್ವಾದ ನಡೆದಿದ್ದು, ಕೆಲ ಯುವಕರು ತಳ್ಳಾಟ ನಡೆಸಿದರು. ಈ ಹಿನ್ನೆಲೆ ಲಘು ಲಾಠಿ ಪ್ರಹಾರ ಮಾಡಿ ಕೆಲವರನ್ನ ವಶಕ್ಕೆ ಪಡೆದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಅಗ್ನಿಪಥ ವಿರುದ್ಧ ಬಿಹಾರ್ನಲ್ಲಿ ಬಸ್ - ಲಾರಿಗೆ ಬೆಂಕಿ:ತಮಿಳುನಾಡು -ಪಂಜಾಬ್ದಲ್ಲಿ ತೀವ್ರಗೊಂಡ ಪ್ರತಿಭಟನೆ!
ಅಗ್ನಿಪಥ್ ಗಲಾಟೆ ಹಿನ್ನೆಲೆ ಗಲಾಟೆ ನಡೆದ ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಲಾಟೆ ಸಂಬಂಧ 30 ಜನರನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಹುಡುಗರು ಬೆಳಗ್ಗೆ ಸೇರಿದ್ದರು. ಪೊಲೀಸರು ಅವರಿಗೆ ಮನವೊಲಿಸಿ ಚದುರಿಸಲು ಯತ್ನಿಸಿದ್ದರು. ಆಗ ಮನವಿ ಕೊಡುತ್ತೇವೆ ಎಂದಿದ್ದರು. ಹೀಗಾಗಿ ಎಡಿಸಿಯವರು ಅಲ್ಲಿಯೇ ಬಂದು ಮನವಿ ಸ್ವೀಕರಿಸಿದ್ದರು. ಆ ಬಳಿಕ ಅಲ್ಲಿಂದ ಹೋಗದ ಕಾರಣ ಈಗ 30 ಜನರನ್ನು ವಶಕ್ಕೆ ಪಡೆದಿದ್ದೇವೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ತಪ್ಪಿಸಿಕೊಂಡ ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.