ಧಾರವಾಡ: ಅನಧಿಕೃತ ಮೈಕ್ಗಳ ವಿರುದ್ಧ ನಿಯಮಾವಳಿ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಅನಧಿಕೃತ ಮೈಕ್ಗಳ ತೆರವು ವಿಚಾರದಲ್ಲಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ನಮ್ಮ ಸುಪ್ರಭಾತ ಅಭಿಯಾನವನ್ನು ಮುಂದುವರೆಸುತ್ತೇವೆ. ಯಾವ ಯಾವ ಜಿಲ್ಲೆಯ ದೇವಸ್ಥಾನಗಳಲ್ಲಿ ಸೋಮವಾರ ಸುಪ್ರಭಾತ ಮಾಡಲು ಆಗಿಲ್ಲವೋ ಅಲ್ಲೆಲ್ಲಾ ಮುಂದುವರೆಸುತ್ತೇವೆ ಎಂದು ಹೇಳಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗ ನಿಂದನೆ ಕೇಸ್ ಸಹ ಹಾಕುತ್ತೇವೆ. ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿದೆ. ಸಿಎಂ, ಗೃಹ ಮಂತ್ರಿ, ರಾಜ್ಯ ಕಾರ್ಯದರ್ಶಿ, ಎಲ್ಲ ಜಿಲ್ಲಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ. ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುಪಿಯಲ್ಲಿ ತೀರ್ಪು ಕೊಟ್ಟ ಮರುದಿನವೇ 40 ಸಾವಿರ ಮೈಕ್ ಇಳಿಸಿದ್ದಾರೆ. ಆದರೆ ನಮ್ಮಲ್ಲಿ 15 ವರ್ಷ ಆದರೂ ಯೋಜನೆ, ಯೋಚನೆ ಅಂತಿದ್ದಾರೆ. ಇಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು. ಮೀನಾಮೇಷ ಎಣಿಸುವ ಅವಶ್ಯಕತೆ ಇಲ್ಲ. ನಾವು ಸರ್ಕಾರದ ಜೊತೆ ಇದ್ದೇವೆ. ಕೋರ್ಟ್ ಆದೇಶ ಪಾಲನೆ ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಅದನ್ನು ವಿರೋಧಿಸುವವರ ಮೇಲೆ ಕ್ರಮ ಕೈಗೊಳ್ಳಲಿ. ಕಾನೂನು ರೀತಿ ಕ್ರಮ ಕೈಗೊಳ್ಳದ ಬಿಜೆಪಿಯ ಈ ಮಾನಸಿಕತೆ ಸರಿಯಲ್ಲ. ಸುಪ್ರಿಂಕೋರ್ಟ್ ಆದೇಶ ಹಿಡಿದುಕೊಂಡು ನಂಜನಗೂಡು ದೇವಸ್ಥಾನ ಒಡೆದು ಹಾಕಿದ್ರಿ, ಅದೇ ನಿಲುವು ಮೈಕ್ ವಿಷಯದಲ್ಲಿ ಯಾಕೆ ಯಾಕಿಲ್ಲ. ಹಿಂದೂಗಳ ವೋಟ್‌ಗೆ ಬಿಜೆಪಿ ಬದ್ಧರಾಗಿರಬೇಕು. ಹಿಂದುತ್ವಕ್ಕಾಗಿಯೇ ಬಿಜೆಪಿ ಆರಿಸಿದ್ದು ಎಂದರು.
ಇದನ್ನೂ ಓದಿ: ಸಮಾಜದ ಶಾಂತಿ ಕದಡುವವರನ್ನು ಒದ್ದು ಒಳಗೆ ಹಾಕಿ.. ಮಾಜಿ ಸಿಎಂ ಹೆಚ್‌ಡಿಕೆ ಗುಡುಗು