ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿ-ಧಾರವಾಡ ಅವಳಿನಗರದ ರಸ್ತೆಯಲ್ಲಿ ಸಂಚಾರ ಮಾಡುವುದೇ ಒಂದು ಸಾಹಸದ ಕೆಲಸ. ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವ ದುಸ್ಥಿತಿಗೆ ರಸ್ತೆ ತಲುಪಿದೆ. ಹಿಗಾಗಿ ಆಕ್ರೋಶಗೊಂಡಿರುವ ಮಹಾನಗರದ ಜನರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಮಾಜಿ ಸಿಎಂ, ಹಾಲಿ ಶಾಸಕ ಜಗದೀಶ್ ಶೆಟ್ಟರ್ ಮತ್ತು ಪ್ರಧಾನಿ ಮೋದಿ ಅವರ ಪ್ರತಿಕೃತಿಯನ್ನು ಕೆಸರು ತುಂಬಿದ ರಸ್ತೆಯಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಗುಂಡಿಗಳಿಂದಾಗಿ ನಗರದ ರಸ್ತೆಗಳೇ ಕಣ್ಮರೆಯಾಗಿವೆ. ಅಲ್ಲದೇ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಅವಳಿ ನಗರದಾದ್ಯಂತ ನಿರ್ಮಾಣವಾಗಿರುವ ತಗ್ಗು ಗುಂಡಿಗಳನ್ನು ಮುಚ್ಚುವುದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬರೋಬ್ಬರಿ 3.57 ಕೋಟಿ ರೂ.ನ ಟೆಂಡರ್ ನೀಡಿದೆ. ಅದರಲ್ಲಿ ಈಗಾಗಲೇ ಸುಮಾರು 2 ಕೋಟಿ ರೂ. ಹಣವನ್ನು ತಗ್ಗು ಗುಂಡಿ ಮುಚ್ಚಲು ವ್ಯಯ ಮಾಡಲಾಗಿದ್ದರೂ, ಆ ರಸ್ತೆಗಳು ಮಾತ್ರ ಯಾವುದೇ ದುರಸ್ತಿ ಕಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಹೀಗಾಗಿ ಕೇವಲ ರಸ್ತೆಯಲ್ಲಿ ನಿರ್ಮಾಣವಾಗಿರೋ ತಗ್ಗು ಗುಂಡಿಗಳನ್ನು ಮುಚ್ಚುವುದಕ್ಕೆಂದು ಮೂರುವರೆ ಕೋಟಿ ರೂಪಾಯಿ ಹಣ ವ್ಯಯಿಸಲು ಮುಂದಾಗಿರುವ ಪಾಲಿಕೆ ಅಧಿಕಾರಿಗಳ ನಡೆ ಅವಳಿ ನಗರದ ಜನರಿಗೆ ಅನುಮಾನ ಮೂಡಿಸುವಂತೆ ಮಾಡಿದೆ.
ಪ್ರಮುಖವಾಗಿ ಹೆಚ್.ಡಿ.ಎಂ.ಸಿ ಇಡೀ ಅವಳಿ ನಗರದಾದ್ಯಂತ ನಿರ್ಮಾಣವಾಗಿರುವ ತಗ್ಗು ಗುಂಡಿಗಳ ದುರಸ್ತಿಗೆ ಚಿಂತನೆ ನಡೆಸಿದೆ. ಅದರಂತೆ ನಗರದಾದ್ಯಂತ 56 ಸಾವಿರ ಚದರ್ ಪ್ರದೇಶ ಅಂದ್ರೆ ಬರೋಬ್ಬರಿ 463 ಕಿ.ಮೀ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವ ತಗ್ಗು ಗುಂಡಿಗಳನ್ನು ಮುಚ್ಚಲು ಈಗಾಗಲೇ ಬರೋಬ್ಬರಿ ಎರಡು ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನೂ 1.57 ಕೋಟಿ ರೂಪಾಯಿ ಖರ್ಚು ಮಾಡಲು ಕೆಲಸ ನಡೆಸುತ್ತಿದ್ದು, ಪಾಲಿಕೆ ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟೊಂದು ಹಣ ಕೇವಲ ತಗ್ಗು ಗುಂಡಿ ಮುಚ್ಚುವುದಕ್ಕೆ ಬಳಸುವ ಬದಲಿಗೆ ಹೊಸ ರಸ್ತೆಗಳನ್ನೇ ನಿರ್ಮಾಣ ಮಾಡಬಹುದಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ವಿಡಿಯೋ ನೋಡಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಬರ್ಬರ ಹತ್ಯೆ