ಹುಬ್ಬಳ್ಳಿ/ಧಾರವಾಡ: ಕೊರೊನಾ ಪ್ರಕರಣಗಳು ವಿಪರೀತ ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಶನಿವಾರ ವೀಕೆಂಡ್ ಕರ್ಫ್ಯೂ ಕಾರಣ ಎಲ್ಲೆಡೆಯೂ ಪೊಲೀಸ್ ಗಸ್ತು. ನಗರದಲ್ಲಿ ಯಾವುದೋ ಕಾರಣಕ್ಕೆ ಯುವಕನೊಬ್ಬ ಮಾಸ್ಕ್ ಇಲ್ಲದೇ ಹೊರಬಂದು ಖಾಕಿ ಕೈಗೆ ಸಿಕ್ಕಿಬಿದ್ದು ಪಡಿಪಾಟಲು ಪಟ್ಟ ಘಟನೆ ನಡೆದಿದೆ.
ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವ ವೇಳೆ ಬೈಕ್ ಸವಾರನೊಬ್ಬ ಮಾಸ್ಕ್ ಇಲ್ಲದೇ ಬಂದಿದ್ದಾನೆ. ಇದನ್ನು ಕಂಡಿದ್ದೇ ತಡ ಮುಗಿಬಿದ್ದ ಪೊಲೀಸ್ ಯುವಕನನ್ನು ಧರಧರನೇ ಎಳೆದುಕೊಂಡು ಹೋಗಿದ್ದಾನೆ. ಇದಕ್ಕೂ ಮುನ್ನ ಇನ್ನೊಬ್ಬ ಸವಾರ ಬೈಕ್ ಮೇಲೆ ಕುಳಿತಿದ್ದಾಗಲೇ ಅವನನ್ನು ಕೆಡವಲು ಬೈಕ್ ಅನ್ನು ತಳ್ಳಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಇದನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಮಾಸ್ಕ್ ಹಾಕದಿದ್ದರೆ ದಂಡ ಅಥವಾ ಬುದ್ಧಿ ಹೇಳಬೇಕಾದ ಪೊಲೀಸಪ್ಪ ಯುವಕನ ಜೊತೆ ಈ ರೀತಿ ನಡೆದುಕೊಂಡು ಸಾಮಾಜಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಅಲ್ಲದೇ ಈ ಯುವಕ ತನ್ನಿಂದ ತಪ್ಪಾಗಿದೆ. ಇನ್ನೊಮ್ಮೆ ಈ ರೀತಿ ಮಾಡಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಧಾರವಾಡದಲ್ಲಿ ವೀಕೆಂಡ್ ಬಂದ್..
ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಎರಡನೇ ವಾರಕ್ಕೆ ಕಾಲಿಟ್ಟಿದೆ. ಧಾರವಾಡದಲ್ಲಿ ವಾರಾಂತ್ಯದ ನಿರ್ಬಂಧಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ವಾರಾಂತ್ಯದ ನಿರ್ಬಂಧವಿರುವ ಕಾರಣ ನಗರದ ಸುಭಾಸ್ ರಸ್ತೆ, ಸೂಪರ್ ಮಾರ್ಕೆಟ್ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಸಂಕ್ರಾಂತಿ ಹಬ್ಬ ಇದ್ದರೂ ವ್ಯಾಪಾರ ಕಳೆಗಟ್ಟಿರಲಿಲ್ಲ. ದಿನಸಿ ಅಂಗಡಿ, ಬೇಕರಿ, ಹಾಲು, ಮೊಸರು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಸುತ್ತಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದರು. ಬಸ್ ನಿಲ್ದಾಣ ಕೂಡ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಅವಶ್ಯಕತೆಗೆ ಅನುಗುಣವಾಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದ್ರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ಕೊಡಗು : ಬೈಕ್ ಮೇಲೆ ಕಾಡಾನೆ ದಾಳಿ.. ಕ್ರಿಕೆಟ್ ಆಡಿ ಮನೆಗೆ ಬರುತ್ತಿದ್ದ ಯುವಕ ಬಾರದ ಲೋಕಕ್ಕೆ