ಹುಬ್ಬಳ್ಳಿ/ಬೆಳಗಾವಿ/ಕಲಬುರಗಿ/ರಾಯಚೂರು : ರಾಜ್ಯಾಂದ್ಯಂತ ಇಂದು ಸರಳವಾಗಿ ಬಸವ ಜಯಂತಿ ಮತ್ತು ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್ನನ್ನು ಆಚರಿಸಲಾಯಿತು.
ಹುಬ್ಬಳ್ಳಿಯಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬಸವ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಸಂತೋಷ ಚೌಹಾಣ್, ರವಿ ನಾಯಕ್ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಸರಳವಾಗಿ ಬಸವ ಜಯಂತಿ, ರಂಜಾನ್ ಆಚರಣೆ ಆಚರಣೆ ಮಾಡಲಾಯಿತು. ಲಿಂಗಾಯತ ಸಮುದಾಯದವರು ಮನೆಯಲ್ಲೇ ವಚನ ಪಠಣ, ಲಿಂಗಪೂಜೆ ಜೊತೆಗೆ ಬಸವಣ್ಣನ ಭಾವಚಿತ್ರಕ್ಕೆ ಹೂಮಾಲೆ ಸಮರ್ಪಿಸಿ ಬಸವ ಜಯಂತಿ ಆಚರಿಸಿದರು.
ಇನ್ನು, ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಿಂಗನದ ಬದಲಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಬಂಧಿಕರು, ಗೆಳೆಯರು ಮತ್ತು ಹಿತೈಷಿಗಳಿಗೆ ಶುಭಾಶಯ ಕೋರಿದರು.
ಕಲಬುರಗಿಯೂ ಸಹ ಲಾಕ್ಡೌನ್ ಹಿನ್ನೆಲೆ ಬಸವ ಜಯಂತಿಯನ್ನು ನಗರದ ಜಗತ್ ವೃತ್ತದ ಬಳಿಯ ಬಸವೇಶ್ವರ ಪುತ್ಥಳಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸಿ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ಬಸವ ಜಯಂತಿ ಮತ್ತು ರಂಜಾನ್ ಆಚರಿಸುವಂತೆ ಮನವಿ ಮಾಡಿದರು.
ರಾಯಚೂರು ಜಿಲ್ಲೆಯಾದ್ಯಂತ ಇಂದು ಜಗತ್‌ಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನ ಅತ್ಯಂತ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ನಗರದ ಬಸವೇಶ್ವರ ವೃತ್ತದ ಬಳಿ ಶ್ರೀಬಸವೇಶ್ವರ ಫೋಟೋಗೆ ಪೂಜೆ ನೆರವೇರಿಸಿ, ಬಳಿಕ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.