ಹುಬ್ಬಳ್ಳಿ : ಶಾಪ್ಸ್ ಅಂಡ್ ಎಸ್ಟಾಬ್ಲೀಶ್ಮೆಂಟ್ ಆ್ಯಕ್ಟ್‌ನಡಿ ನೋಂದಣಿಯಾಗಿರುವ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಎಲ್ಲಾ ಪ್ರತ್ಯೇಕ ಅಂಗಡಿ, ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಅವರು ಕೆಂಪು, ಹಳದಿ, ಹಸಿರು ವಲಯಗಳನ್ನು ಗುರುತಿಸಿ ಜಿಲ್ಲಾ ಉಸ್ತುವಾರಿ ಸಚಿವರೇ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಜಗದೀಶ್ ಶೆಟ್ಟರ್ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದರು. ಸದ್ಯ ಹುಬ್ಬಳ್ಳಿ ನಗರ ಹೊರತುಪಡಿಸಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಅಗತ್ಯ ಸೇವೆಗಳ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ವಾರದಲ್ಲಿ ನಾಲ್ಕು ದಿನಗಳ ಅವಕಾಶ ನೀಡಲಾಗಿದೆ.
ನಗರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಿರುವ ಕಡೆ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಹೀಗಾಗಿ ಹುಬ್ಬಳ್ಳಿ ನಗರವನ್ನು ಹೊರತುಪಡಿಸಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಎಲ್ಲಾ ಹಳ್ಳಿಗಳ ಪ್ರತ್ಯೇಕ ಅಂಗಡಿ, ಮುಂಗಟ್ಟುಗಳನ್ನು ಕೆಲವು ಷರತ್ತುಗಳನ್ನು ವಿಧಿಸಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.