ಹುಬ್ಬಳ್ಳಿ: ಇಸ್ರೇಲ್ನಲ್ಲಿ ಶುಶ್ರೂಷಕಿ ಉದ್ಯೋಗ ಕೊಡಿಸುವುದಾಗಿ ಇಬ್ಬರು ಖದೀಮರು ನಂಬಿಸಿ ಕಿಮ್ಸ್‌ನಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ 5.73 ಲಕ್ಷ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾರವಾರ ರಸ್ತೆಯ ಮಿಸನ್ ಕಾಂಪೌಂಡ್ ನಿವಾಸಿ ಸುಪ್ರಿಯಾ ಸ್ಟಿಫನ್ ವಂಚನೆಗೆ ಒಳಗಾದ ಮಹಿಳೆ. ತಮಿಳುನಾಡಿನ ಕಂಬಮ್‌ನ ಸ್ಟಿಫನ್ ಉತೈಕುಮಾರ್ ಹಾಗೂ ಮಂಗಳ ಓಣಿಯ ರೂಥಾ ದೇವನೂರ ವಂಚನೆ ಮಾಡಿರುವ ಆರೋಪಿಗಳು. ಸುಪ್ರಿಯಾ ಅವರಿಗೆ ಪರಿಚಯವಿದ್ದ ರೂಥಾ, ವಿದೇಶದಲ್ಲಿ ನಿನಗೆ ಕೆಲಸ ಕೊಡಿಸುತ್ತೇನೆ, ನೀವು ಈ ನಂಬರ್ಗೆ ಕರೆ ಮಾಡಿ ಎಂದು ನಂಬರ್ ನೀಡಿದ್ದಾಳೆ. ಸುಪ್ರಿಯಾ ಕರೆ ಮಾಡಿ ಕೆಲಸದ ಬಗ್ಗೆ ವಿಚಾರಿಸಿದಾಗ, ಇಸ್ರೆಲ್‌ನಲ್ಲಿ ಕೆಲಸವಿದ್ದು, ಅದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ನೀವು ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿ ಎಂದು ಆರೋಪಿ ಉತೈಕುಮಾರ್ ಲಕ್ಷಾಂತರ ರೂ. ಹಾಕಿಸಿಕೊಂಡಿದ್ದಾನೆ.
ನಂತರ ನಕಲಿ ದಾಖಲೆ ಸೃಷ್ಟಿಸಿ ಸುಪ್ರಿಯಾ ಅವರ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ನಂಬಿಕೆ ಬರುವಂತೆ ಮಾಡಿದ್ದಾನೆ. ಉದ್ಯೋಗ ನೀಡದಿರುವುದನ್ನು ಪ್ರಶ್ನಿಸಿದ ನಂತರ ವಂಚನೆ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.