ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಗೊಳಿಸಿದ್ದು, ಅಕ್ಟೋಬರ್ 1ರಂದು ಚುನಾವಣೆ ಅಧಿಸೂಚನೆ ಪ್ರಕಟಿಸಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಗೆ ಆಯೋಗ ಇಬ್ಬರು ಎಆರ್‌ಸಿ ಹಾಗೂ ಓರ್ವ ಎಆರ್‌ಓ ನೇಮಿಸಿದೆ. ರಾಜಕೀಯ ಪಕ್ಷಗಳ ವಿನಂತಿ ಮೇರೆಗೆ ಮೊದಲ ಬಾರಿಗೆ ಕೆಲ ಬದಲಾವಣೆ ಮಾಡಿಕೊಂಡಿದೆ. ನಾಮಪತ್ರ ಸಲ್ಲಿಕೆ ಹಾಗೂ ಎಣಿಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆಯಲಿದೆ. ತಮ್ಮ ಅನುಪಸ್ಥಿತಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುತ್ತಾರೆ ಎಂದರು.
ಅಕ್ಟೋಬರ್ 1ರಿಂದ ಅಕ್ಟೋಬರ್ 8ರವರೆಗೆ ನಿತ್ಯವೂ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರ ವರಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸ್ವೀಕಾರ ಕಾರ್ಯ ನಡೆಯಲಿದೆ. ಅಕ್ಟೋಬರ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ.9ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಇನ್ನು, ಉಮೇದುವಾರಿಕೆ ಹಿಂಪಡೆಯಲು ಅ.12 ಕೊನೆಯ ದಿನ. ಅ.28ರಂದು ಬೆಳಗ್ಗೆ 8 ರಿಂದ ಸಂಜೆ 5ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲರೂ ಶಾಂತಿಯುತವಾಗಿ ಚುನಾವಣೆ ಹಾಗೂ ಎಣಿಕೆಗೆ ಸಹಕರಿಸಬೇಕು ಎಂದರು.
ಇನ್ನು, ಕೊವೀಡ್ ಇರುವುದರಿಂದ ಚುನಾವಣೆ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುವುದು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಸಹ ಮಾಡಲಾಗುವುದು ಎಂದರು.