ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಬಳಸಿದ ಬಯೋ ಮೆಡಿಕಲ್ ವೇಸ್ಟ್ ಅನ್ನು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ಎಸೆಯಲಾಗಿತ್ತು. ಈ ಕುರಿತು ಈಟಿವಿ ಭಾರತ ಸುದ್ದಿ ಬಿತ್ತರ ಮಾಡಿತ್ತು. ಇದರಿಂದಾಗಿ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಮೆಡಿಕಲ್ ವೇಸ್ಟ್ ತೆರವು ಮಾಡಿದ್ದಾರೆ.
ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯ ಹಿಂಭಾಗದ ಗೋಲ್ಡನ್ ಟೌನ್ ಬಳಿ ರೋಗಿಗಳಿಗೆ ಬಳಸಿದ ಸಿರಿಂಜ್ ಮತ್ತು ಸಲಾಯಿನ್ ಬಾಟಲ್‌ಗಳನ್ನು ಹಾಕಿದ್ದರು. ಇದರಿಂದಾಗಿ ಅಲ್ಲಿನ ನಿವಾಸಿಗಳಿಗೆ ಆತಂಕ ಮನೆ ಮಾಡಿತ್ತು. ಈ ಕುರಿತು ಈಟಿವಿ ಭಾರತ 'ರಸ್ತೆಗೆ ಬಿದ್ದ ಸಿರಿಂಜ್ ಮತ್ತು ಸಲಾಯಿನ್ ಬಾಟಲ್‌ಗಳು - ಆತಂಕದಲ್ಲಿ ಸ್ಥಳೀಯರು!" ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು.
ಸುದ್ದಿ ನೋಡಿದ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರು ಪರಿಸರ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಲ್ಲಿ ಬಿಸಾಡಿರುವ ಬಯೋ ಮೆಡಿಕಲ್ ವೇಸ್ಟ್ ಅನ್ನು ತೆರವು ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಹಿತ ಹಾಗೂ ಆರೋಗ್ಯ ಕಾಪಾಡಬೇಕಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲು ಮುಂದಾಗಿರುವುದಕ್ಕೆ ಸಾರ್ವಜನಿಕರು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆಗೆ ಬಿದ್ದ ಸಿರಿಂಜ್ ಮತ್ತು ಸಲಾಯಿನ್ ಬಾಟಲ್‌ಗಳು -ಆತಂಕದಲ್ಲಿ ಸ್ಥಳೀಯರು!