ಹುಬ್ಬಳ್ಳಿ: ನಾಳೆಯಿಂದ ಬೆಳಗಾವಿ ಅಧಿವೇಶ ಆರಂಭವಾಗುತ್ತದೆ. ಈಗಾಗಲೇ ಎಲ್ಲಾ ತಯಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಮತಾಂತರ ನಿಷೇಧ ಕಾಯ್ದೆ ಮಂಡನೆ ವಿಚಾರ:
ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಈಗಾಗಲೇ ಕ್ರಿಶ್ಚಿಯನ್ ಸಮುದಾಯ ನಾಯಕರಿಗೆ ನಾನು ಹೇಳಿದ್ದೇನೆ. ಅವರಿಗೆ ಯಾವುದೇ ತೊಂದರೆಯಾಗಲ್ಲ. ಬದಲಾಗಿ ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ ಮಾಡುವುದು ತಪ್ಪು. ಆಸೆ ಆಮಿಷವೊಡ್ಡಿ ಮತಾಂತರ ಮಾಡಲು ಅವಕಾಶವಿಲ್ಲ.
ಮತಾಂತರ ಕಾಯ್ದೆ ಚರ್ಚೆಗೂ ಮೊದಲು ಒಂದು ಕಮಿಟಿ ಮಾಡಿದ್ದೇವೆ. ಕಾನೂನು ಇಲಾಖೆ ಕಮಿಟಿ ಪರಿಶೀಲನೆ ಮಾಡುತ್ತಿದೆ. ಆ ವರದಿ ನಮ್ಮ ಕ್ಯಾಬಿನೆಟ್ಗೆ ಬರುತ್ತದೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ಅಲ್ಲಿಂದ ಅಸೆಂಬ್ಲಿಗೆ ಬಂದ್ರೆ ಬೆಳಗಾವಿಯಲ್ಲೇ ಚರ್ಚೆ ಮಾಡುತ್ತೇವೆ. ಯಾವ ಧರ್ಮಕ್ಕೂ ಆತಂಕವಾಗಬಾರದು. ಮತಾಂತರ ಎನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನನ್ನ ತರುವ ಪ್ರಯತ್ನವನ್ನ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಒಮಿಕ್ರಾನ್ ಟೆಸ್ಟಿಂಗ್ ಲ್ಯಾಬ್ ಗಳನ್ನ ಹೆಚ್ಚಿಗೆ ಮಾಡುತ್ತೇವೆ. ಈಗಾಗಲೇ ಒಂದು ಜಿನೊಮಿಕ್ ಸೀಕ್ವೇನ್ಸ್ ಲ್ಯಾಬ್ ಇದ್ದು, ಅವುಗಳನ್ನು ಹೆಚ್ಚಳ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಮೋದಿ ಟ್ವಿಟರ್ ಹ್ಯಾಕ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈಗಾಗಲೇ ಪ್ರಧಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಕೂಡ ಮಾಡಿದ್ದಾರೆ. ಈ ರೀತಿ ಅಲ್ಲಲ್ಲಿ ಘಟನೆಗಳು ಆಗುತ್ತಿವೆ. ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಧರ್ಮದ ಹೆಸರಲ್ಲಿ ಸಮುದಾಯವನ್ನು ಭಯಪಡಿಸುವವರು ಜಿಹಾದಿಗಳಲ್ಲ, ಫಸಾದಿಗಳು: ಕೇರಳ ರಾಜ್ಯಪಾಲ