ಹುಬ್ಬಳ್ಳಿ: ಕಳೆದೊಂದು ವರ್ಷದಿಂದ ಶಾಂತವಾಗಿದ್ದ ಮಹದಾಯಿ ಹೋರಾಟ ಮತ್ತೆ ಭುಗಿಲೇಳುವ ಸಾಧ್ಯತೆ ಈಗ ದಟ್ಟವಾಗಿದೆ. ಜುಲೈ 21ರಂದು ಗದಗ ಜಿಲ್ಲೆ ನರಗುಂದದಲ್ಲಿ 41ನೇ ರೈತ ಹುತಾತ್ಮರ ದಿನಾಚರಣೆ ಆಚರಣೆ ಮಾಡಲಾಗ್ತಿದೆ. ಈ ವೇಳೆ, ರಾಷ್ಟ್ರೀಯ ರೈತ ಮುಖಂಡರು, ರೈತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿಗಾಗಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧತೆಗೆ ರೈತರು ಮುಂದಾಗಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಲು ಹಿಂದೇಟು ಹಾಕಿದ್ದ ರೈತರು, ಈಗ ಮತ್ತೆ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಮಾರ್ಚ್‌ನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಕೋವಿಡ್ 2ನೇ ಅಲೆಯಿಂದ ರದ್ದಾಗಿತ್ತು. ಈಗ ನರಗುಂದದಲ್ಲಿ ನಡೆಯುವ ರೈತ ಹುತಾತ್ಮ ದಿನಾಚಣೆಯಲ್ಲಿ ಮಹಾದಾಯಿ ಹೋರಾಟ ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.
ನ್ಯಾಯಾಧಿಕರಣ ತೀರ್ಪು ಹೊರಬಂದು ರಾಜ್ಯಗಳಿಗೆ ನೀರು ಹಂಚಿಕೆಯಾಗಿತ್ತು. ಬಳಿಕ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ ಅಂತಾ ಸರ್ಕಾರ ಕುಂಟುನೆಪ ಹೇಳುತ್ತಾ ಬಂದಿತ್ತು. ಕೊನೆಗೆ ಸುಪ್ರೀಂಕೋರ್ಟ್ ಸೂಚನೆ ಮೆರೆಗೆ ಕೇಂದ್ರಸರ್ಕಾರ, ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ವರ್ಷಗಳೇ ಕಳೆಯುತ್ತಾ ಬಂದ್ರೂ ಕಾಮಗಾರಿ ಆರಂಭವಾಗಿಲ್ಲ. ಇನ್ನು, ರಾಜ್ಯ ಸರ್ಕಾರ ಕಳೆದೆರಡು ಬಜೆಟ್‌ನಲ್ಲಿ ಮಹದಾಯಿಗಾಗಿ ಹಣ ತೆಗೆದಿಟ್ಟು ಕಾಮಗಾರಿ ಶುರು ಮಾಡದೇ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಮಹದಾಯಿ ವಿಷಯದಲ್ಲಿ ಸರ್ಕಾರ ಒಂದಲ್ಲ ಒಂದು ಕುಂಟುನೆಪ ಹೇಳುತ್ತ ರೈತರನ್ನ ಸಾಗಾಕುತ್ತಿದೆ. ಆದ್ರೆ, ರೈತರು ಮಾತ್ರ ಮಹದಾಯಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಈಗ ನರಗುಂದದಲ್ಲಿ ನಡೆಯುವ ರೈತ ಹುತಾತ್ಮ ದಿನಾಚರಣೆಯಲ್ಲಿ ಮೊದಲ ಸಲ ಎಲ್ಲ ಸಂಘಟನೆಗಳು ಒಟ್ಟಿಗೆ ಸೇರಿ ನಿರ್ಣಯ ಕೈಗೊಳ್ಳುವ ಮೂಲಕ ಹೋರಾಟವನ್ನ ತೀವ್ರಗೊಳಿಸಲು ಸಿದ್ಧತೆ ನಡೆಸಿದ್ದು, ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಮುನ್ಸೂಚನೆ ನೀಡಿವೆ.
ಇದನ್ನೂ ಓದಿ: ಕಾರವಾರದ ಕದಂಬ ನೌಕಾನೆಲೆ ಸುತ್ತಮುತ್ತ 4 ಕಿ.ಮೀ ನೋ ಫ್ಲೈ ಝೋನ್