ಹುಬ್ಬಳ್ಳಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಹೆಸರು ಬೆಳೆದ ರೈತರ ಸ್ಥಿತಿ. ನಿರಂತರವಾಗಿ ಸುರಿದ ಮಳೆಯಿಂದ ಹೆಸರು ಗಿಡದಲ್ಲೇ ಮೊಳಕೆಯೊಡೆದು ಹಾಳಾಗುತ್ತಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಧಾರವಾಡ ಜಿಲ್ಲೆಯ ರೈತರು, ಈ ವರ್ಷವೂ ವರುಣನ ಆರ್ಭಟಕ್ಕೆ ತತ್ತರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕಟಾವಿಗೆ ಬಂದಿದ್ದ ಹೆಸರು, ಗಿಡದಲ್ಲೇ ಮೊಳಕೆಯೊಡೆದಿದೆ.
ಕೋಳಿವಾಡ, ಭಂಡಿವಾಡ, ಕುಂದಗೋಳ, ನವಲಗುಂದ ಸೇರಿ ಧಾರವಾಡ ಜಿಲ್ಲೆಯಲ್ಲಿ 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಹೆಸರಿಗೆ ಮಾರುಟ್ಟೆಯಲ್ಲೂ ಸದ್ಯಕ್ಕೆ ಉತ್ತಮ ಬೆಲೆಯಿದೆ. ಆದರೆ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ.
ರೈತರಿಗೆ ಕಟಾವು ಮಾಡಿದ ಹಣವು ಸಿಗದೆ, ಹೊಲದಲ್ಲಿ ಅಳಿದುಳಿದಿರುವ ಬೆಳೆಯನ್ನ ರೈತರು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಬೆಳೆ ನಾಶ ಮಾಡುತ್ತಿದ್ದು, ಬೆಳೆಯ ಹಾನಿಯ ಬಗ್ಗೆ ಸಮೀಕ್ಷೆ ಮಾಡಲು ಅಧಿಕಾರಿಗಳು ಮತ್ತು ಇನ್ಸೂರನ್ಸ್ ಕಂಪನಿಗಳು ರೈತರ ಹೊಲಕ್ಕೆ ಭೇಟಿ ನೀಡಿ ಪರಿಹಾರ ನೀಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಸರು ಬೆಳೆಹಾನಿಗೆ ಜಿಲ್ಲೆಯಲ್ಲಿ ಶೀಘ್ರ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.