ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದೇ ನಾನು. ಆದರೆ ಈಗ ವಿಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಹದಾಯಿ ಹೋರಾಟವನ್ನು ಎಲ್ಲ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿವೆ ಎಂದರು. ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.
ನಾನು ಲಿಂಗಾಯತ ಮತಗಳ ಮೇಲೆ ಗೆಲುತ್ತೇನೆ ಎಂಬ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಡಿಎನ್ಎ ಜನರ ಪರವಾಗಿ ಇರುವಂತದ್ದು. ಎಲ್ಲಾ ಸಮುದಾಯದವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುತ್ತೇನೆ. ಒಂದೇ ಸಮುದಾಯದ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದರು.
ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಮತ ಕೇಳುತ್ತಿದ್ದೇವೆ. ನಗರಕ್ಕೆ ಐ ಟಿ, ಕಿಮ್ಸ್ ಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅವಳಿ ನಗರದಲ್ಲಿ ಒಳಾಂಗಣ ಕ್ರೀಡಾಂಗಣ, ಸ್ಮಾರ್ಟ್ಸಿಟಿ ಯೋಜನೆ, ಉಜ್ವಲ್ ಯೋಜನೆ, ಉಚಿತ ಗ್ಯಾಸ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದೇನೆ. ಕ್ಷೇತ್ರದಲ್ಲಿ ನಾನು ಅಂದು ಕೊಂಡಂತೆಯೇ ಕೆಲವು ಕಾರ್ಯಗಳನ್ನು ಮಾಡಿ ಮುಗಿಸಿದ್ದೇನೆ. ಆದರೆ ಎಲ್ಲವನ್ನೂ ನಾನು ಈಡೇರಿಸಿದ್ದೇನೆ ಎಂದು ಅಹಂಕಾರದಿಂದ ಹೇಳುವುದಿಲ್ಲ ಎಂದರು.
ದೇಶದ ಚುಕ್ಕಾಣಿ ಹಿಡಿಯಲು ನಾಯಕತ್ವ ತುಂಬಾ ಮುಖ್ಯವಾಗಿದೆ. ಈಗ ಅದು ನರೇಂದ್ರ ಮೋದಿಯವರಲ್ಲಿ ಕಾಣುತ್ತಿದ್ದೇವೆ ಎಂದರು.