ಹುಬ್ಬಳ್ಳಿ (ಧಾರವಾಡ): ಹಿರಿಯರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉತ್ತಮ, ಪಕ್ಷ ಹೆಚ್ಚು ಸದೃಢವಾಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು. ನಗರದಲ್ಲಿಂದು ಮಾತಾನಾಡಿದ ಅವರು, ಮೂರು ಬಾರಿ ಸಚಿವರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಿ. ಸಚಿವ ಸ್ಥಾನ ಅನುಭವಿಸಿದವರು ಪಕ್ಷ ಸಂಘಟನೆಗೆ ಒತ್ತು ಕೊಡಲಿ ಎಂದರು.
ಮುಂದೆ ವಿಧಾನಸಭಾ ಚುನಾವಣೆ ಬರಲಿದೆ, ಹಾಗಾಗಿ ಪಕ್ಷದ ಸಂಘಟನೆಗೆ ಹಿರಿಯರು ಒತ್ತು ಕೊಡಬೇಕು. ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಹಿರಿಯರು ಮಾಡಬೇಕು. ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ಹೇಳಿದರು.
'ನನಗೆ ಸಚಿವ ಸ್ಥಾನ ಕೊಡಬೇಕೆಂದಿಲ್ಲ'
ನನಗೆ ಸಚಿವ ಸ್ಥಾನ ಕೊಡಬೇಕೆಂದಿಲ್ಲ. ಯಾರಿಗೆ ಬೇಕಾದ್ರೂ ಸಚಿವ ಸ್ಥಾನ ಕೊಡಲಿ. ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದರು.
ಕರ್ನಾಟಕ ಬಂದ್-ಕಾಂಗ್ರೆಸ್ ಪ್ರಾಯೋಜಿತ ಹೋರಾಟ:
ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ಪ್ರಾಯೋಜಿತ ಹೋರಾಟ. ಕೋವಿಡ್ನಿಂದ ಜನ ಬಳಲಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಆಚರಿಸುವುದು ಸರಿಯಲ್ಲ. ಎಂಇಎಸ್ ಮೇಲಿನ ನಿರ್ಬಂಧಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.
ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ದ - ಈಶ್ವರಪ್ಪ
ಸಚಿವ ಸ್ಥಾನ ಬಿಟ್ಟು ಕೊಡಲು ಪಕ್ಷದ ಹಿರಿಯರು ಧಾರಾಳವಾಗಿ ತಯಾರಿದ್ದೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಈಗಾಗಲೇ ಸಚಿವರಾದವರು ಸಚಿವ ಸ್ಥಾನ ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂಬ ರೇಣುಕಾಚಾರ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಹಿರಿಯರನ್ನು ತೆಗೆದು ಹೊಸಬರಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದರೆ ಪ್ರಥಮವಾಗಿ ಒಪ್ಪಿಕೊಂಡು ಸಂತೋಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸ್ವಯಂ ಪ್ರೇರಿತವಾಗಿ ಸಚಿವ ಸ್ಥಾನ ಬಿಟ್ಟುಕೊಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಸ್ಥಾನಮಾನ ಬಹಳ ಮಹತ್ವದ್ದಾಗಿದೆ. ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೆಯದು, ಕೆಟ್ಟದ್ದು ಎಂಬುವುದು ರಾಜಕೀಯದಲ್ಲಿ ಇರುವವರಿಗೆ ಗೊತ್ತು ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಬಂದ್ ಒಳ್ಳೆಯದಲ್ಲ:
ಈಗಾಗಲೇ ಸರ್ಕಾರದಿಂದ ಎಂಇಎಸ್ ಪುಂಡರಿಗೆ ಕಠಿಣ ಶಿಕ್ಷೆ ನೀಡಲು ತಿಳಿಸಲಾಗಿದೆ. ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಂದ್ ಮಾಡುವುದು ಈ ಪರಿಸ್ಥಿತಿಯಲ್ಲಿ ಒಳ್ಳೆಯದಲ್ಲ. ಎಂಇಎಸ್ ಧೋರಣೆ ಬಗ್ಗೆ ಮಾಹಿತಿ ಕಲೆಹಾಕಿ ಕೇಂದ್ರಕ್ಕೆ ನೀಡಲಾಗಿದ್ದು, ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು. ರಾಜ್ಯ ಅಧ್ಯಕ್ಷರು ಹಿಂದುಳಿದ ವರ್ಗದ ಜವಾಬ್ದಾರಿ ನನಗೆ ನೀಡಿದ್ದಾರೆ. ಹಾಗಾಗಿ ಶಿವಮೊಗ್ಗದಲ್ಲಿ ಜ. 5 ರಂದು ರಾಜ್ಯ ಕಾರ್ಯಕಾರಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಪಘಾತದಲ್ಲಿ ಬ್ರೈನ್ ಡೆಡ್ : 32 ವರ್ಷದ ಯುವಕನ ಅಂಗಾಂಗ ದಾನ