ಹುಬ್ಬಳ್ಳಿ: ಕೋವಿಡ್-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸಾರ್ವಜನಿಕರಿಗಾಗಿ ಚೌಕಟ್ಟು ನಿರ್ಮಿಸಿ ಕೆಲ ಮಾರುಕಟ್ಟೆಗಳನ್ನು ತೆರೆಯಲಾಗಿತ್ತು. ಸರ್ಕಾರದ ಆದೇಶಗಳನ್ನು ಜನರು ಪಾಲಿಸದ ಕಾರಣ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ.
ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿ ಮತ್ತು ತರಕಾರಿ ದೊರೆಯುವಂತೆ ಮಾಡಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡಲು ಚೌಕಟ್ಟು ನಿರ್ಮಿಸಲಾಗಿತ್ತು. ನೆಹರೂ ಮೈದಾನ, ಬಸ್ ನಿಲ್ದಾಣ, ಈದ್ಗಾ ಮೈದಾನದಲ್ಲಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಎಲ್ಲಾ ತಾತ್ಕಾಲಿಕ ಮಾರುಕಟ್ಟೆಗಳನ್ನು ರದ್ದು ಮಾಡಲಾಗಿದೆ.
ಅವಳಿ ನಗರಗಳ ಎಲ್ಲಾ ಕಾಲೊನಿಗಳಲ್ಲಿ ಅಗತ್ಯ ದಿನಸಿ ವಸ್ತುಗಳು ಹಾಗೂ ತರಕಾರಿಯನ್ನು ವ್ಯಾಪಾರಸ್ಥರೇ ಬಂದು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಮನೆ ಹೊರಗೆ ಬರಬೇಡಿ. ಸರ್ಕಾರದ ನಿಯಮಾವಳಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮನವಿ ಮಾಡಿದೆ.