ಧಾರವಾಡ: 'ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಕಾರ್ಯಕರ್ತ ನಬೀಸಾಬ್ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ. ಏಪ್ರಿಲ್ 9ಕ್ಕೆ ಗಲಾಟೆ ಆಗಿತ್ತು. ಅಂದು ನಡೆದ ನಿಜವಾದ ಘಟನೆಯೇ ಬೇರೆ. ನಬೀಸಾಬ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ನಬೀಸಾಬ್‌ಗೂ ನಮಗೂ ಭೇಟಿಯೇ ಆಗಿಲ್ಲ' ಎಂದು ಪ್ರತಿದೂರು ನೀಡಿದ ಶ್ರೀರಾಮ ಸೇನೆ ಕಾರ್ಯಕರ್ತ ಮಹಾಲಿಂಗ ಐಗಳಿ ತಿಳಿಸಿದರು.
'ಯಾವ ವ್ಯಕ್ತಿಯಿಂದ ಗಲಾಟೆ ಆಗಿತ್ತೋ ಆ ವ್ಯಕ್ತಿಯನ್ನು ಇಲ್ಲಿ ಮರೆಮಾಚಿದ್ದಾರೆ. ಅದಕ್ಕಾಗಿ ನಬೀಸಾಬ್ನನ್ನು ಬಳಸಿಕೊಂಡಿದ್ದಾರೆ. ಆತನಿಗೆ ವಯಸ್ಸಾಗಿದೆ, ಬಡವ ಎಂದೆಲ್ಲಾ ಕ್ರಿಯೇಟ್ ಮಾಡಿದ್ದಾರೆ' ಎಂದರು.
'ಅಂದು ನಾವು ಎರಡು ಬೈಕ್ ಮೇಲೆ ನಾಲ್ವರು ಹೋಗಿದ್ದೆವು. ಕಲ್ಲಂಗಡಿ ತಿನ್ನಲು ಜೊತೆಗಿದ್ದ ಮೈಲಾರಪ್ಪ ಮುಂದಾದ. ಆಗ ಅಂಗಡಿಯಲ್ಲಿದ್ದ ವ್ಯಕ್ತಿ ಕಲ್ಲಂಗಡಿಗೆ ಉಗಿದು ಕೊಡುತ್ತಿದ್ದ, ಅದನ್ನು ನಾವು ಪ್ರಶ್ನೆ ಮಾಡಿದೆವು. ಅದಕ್ಕೆ ಸಂಬಂಧಿಸಿದಂತೆ ಜಗಳ ಶುರುವಾಯಿತು. ಕಲ್ಲಂಗಡಿಯಂತೆ ಕತ್ತರಿಸುತ್ತೇನೆ ಎಂದಿದ್ದ ಎಂದು ಗಲಾಟೆ' ಬಗ್ಗೆ ವಿವರಿಸಿದರು.
'ಮೊದಲ ವಿಡಿಯೋ ಯಾರೂ ಮಾಡಿಲ್ಲ': 'ಮೈಲಾರಪ್ಪನನ್ನು ತಳ್ಳಲಾಯಿತು. ಆಗ ಮೈಲಾರಪ್ಪ ತಳ್ಳುಗಾಡಿಗೆ ಡಿಕ್ಕಿ ಹೊಡೆದ. ಆಗ ಕಲ್ಲಂಗಡಿಗಳು ಕೆಳಗೆ ಬಿದ್ದಿದ್ದವು. ನಾವು ನಾಲ್ವರು ಮಾತ್ರ ಇದ್ದೆವು. ಅವರು ಸುಮಾರು ಹದಿನೈದು ಮಂದಿ ಇದ್ದರು. ಗಲಾಟೆ ವೇಳೆ ನಾವು ಒಂದೆರಡು ಕಲ್ಲಂಗಡಿ ಒಡೆದೆವು. ಅದನ್ನು ಮಾತ್ರ ಜನರು ವಿಡಿಯೋ ಮಾಡಿದ್ದಾರೆ. ಅದಕ್ಕಿಂತ ಮೊದಲಿನ ವಿಡಿಯೋವನ್ನು ಯಾರೂ ಮಾಡಿಲ್ಲ. ಆ ವಿಡಿಯೋದಲ್ಲಿಯೂ ನಬೀಸಾಬ್ ಇಲ್ಲ. ಗಲಾಟೆ ಬಳಿಕ ಬಂದಿದ್ದಾರೆ. ಹೀಗಾಗಿ ನಾವು ಈಗ ಪ್ರತಿದೂರು ದಾಖಲಿಸಿದ್ದೇವೆ. ಚಾಕು ತೋರಿಸಿದ್ದ ವ್ಯಕ್ತಿಯನ್ನು ಬಚ್ಚಿಡಲು ಇಷ್ಟೆಲ್ಲ ಕ್ರಿಯೇಟ್ ಮಾಡಿದ್ದಾರೆ' ಎಂದು ಘಟನೆಯನ್ನು ವಿವರಿಸಿದರು.
ಇದನ್ನೂ ಓದಿ: ಧಾರವಾಡ ಕಲ್ಲಂಗಡಿ ತೆರವು ಕೇಸ್ಗೆ ಟ್ವಿಸ್ಟ್: ದೂರು ನೀಡಿದ್ದ ವ್ಯಕ್ತಿ ವಿರುದ್ಧ ಪ್ರತಿದೂರು
ನಬೀಸಾಬ್ ಪ್ರತಿಕ್ರಿಯೆ: ಪ್ರತಿದೂರು ವಿಚಾರಕ್ಕೆ ಕಲ್ಲಂಗಡಿ ಅಂಗಡಿ ಮಾಲೀಕ ನಬೀಸಾಬ್ ಪ್ರತಿಕ್ರಿಯಿಸಿ, 'ಅವರು ತೆಂಗಿನಕಾಯಿ ಒಡೆಯುತ್ತಾ ಬಂದಿದ್ದರು. ನಮ್ಮ ಅಂಗಡಿಗೆ ಬಂದು ಕಲ್ಲಂಗಡಿ ಒಡೆಯೋಕೆ ಶುರು ಮಾಡಿದರು' ಎಂದರು. ಇದೇ ವೇಳೆ, ಕಲ್ಲಂಗಡಿ ಮೇಲೆ ಉಗುಳಿ ಕೊಡುತ್ತಿದ್ದಾರೆನ್ನುವ ಆರೋಪದ ಬಗ್ಗೆ ಮಾತನಾಡಿ, 'ಅವರು ಬೇಕಾದಾಗೆ ಹೇಳಬಹುದು. ಅಲ್ಲಿ ಜನರಿದ್ದರು, ಬೇರೆ ಬೇರೆ ವ್ಯಾಪಾರಿಗಳೂ ಅಲ್ಲಿದ್ದರು. ಅವರನ್ನೆಲ್ಲ ಬೇಕಾದರೆ ಕೇಳಲಿ. ಚಾಕು ತೋರಿಸಿಲ್ಲ, ನಾನೇಕೆ ಹೆದರಿಸಲಿ? ಅವರು ಒಡೆಯೋಕೆ ಶುರು ಮಾಡಿದ ಮೇಲೆ ನಾನೇ ಓಡಿ ಹೋಗಿದ್ದೆ' ಎಂದು ತಿಳಿಸಿದರು.