ಹುಬ್ಬಳ್ಳಿ: ಮಹದಾಯಿಗಾಗಿ ಮಹಾವೇದಿಕೆ ರೈತ ಸಮಿತಿ ಹಾಗೂ ಸಹ್ಯಾದ್ರಿ ಜಲಜನ ಸೊಸೈಟಿ ಸಹಯೋಗದಲ್ಲಿ ದೆಹಲಿಗೆ ಭೇಟಿ ನೀಡಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಮಹಾವೇದಿಕೆ ರೈತ ಸಂಘಟನೆ ಮುಖಂಡ ಶಂಕರಿ ಅಂಬಲಿ ಹೇಳಿದರು.
ಮಹದಾಯಿ ಹೋರಾಟ ನಾಲ್ಕು ದಶಕಗಳಿಂದ ನಡೆಯುತ್ತಿದ್ದರೂ ಇತ್ಯರ್ಥವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ 8ರಂದು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೇ, ಮಲಪ್ರಭಾ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೆ ಸೂಕ್ಷ್ಮ ನೀರಾವರಿ ಯೋಜನೆ ಅಳವಡಿಸಲು ₹ 13,604 ಕೋಟಿ ಬಿಡುಗಡೆ ಮಾಡುವಂತೆ ವಿಸ್ತೃತ ಯೋಜನಾ ಅಂದಾಜು ವರದಿಯನ್ನು ಕೂಡ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸಚಿವರು, ಮಹದಾಯಿ ನ್ಯಾಯಾಧಿಕರಣ ತೀರ್ಪನ್ನು ಮೂರು ರಾಜ್ಯಗಳು ಪ್ರಶ್ನಿಸಿವೆ. ಹೆಚ್ಚಿನ ನೀರಿಗಾಗಿ ಸುಪ್ರೀಂಕೋರ್ಟ್ಗೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಆತಂಕವಾಗಿದೆ. ರಿವಿಜನ್ ಪಿಟಿಸನ್ ಆಫ್ ಕ್ಲಾರಿಫಿಕೇಷನ್ ಕೊನೆಗೊಂಡಾಗ ಇದರ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಸಾಧ್ಯವಾಗುತ್ತದೆ ಎಂದು ಶೇಖಾವತ್ ಅವರು ತಿಳಿಸಿದ್ದಾರೆ. ಮೂರು ರಾಜ್ಯಗಳು ಒಮ್ಮತದ ನಿರ್ಧಾರ ಕೈಗೊಂಡು ಮಹದಾಯಿ ಇತ್ಯರ್ಥಕ್ಕೆ ಕಾನೂನಾತ್ಮಕ ಸೂಚನೆ ನೀಡಲಾಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.