ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸುಪ್ರೀಂಕೋರ್ಟ್ ಈಗಾಗಲೇ ಸಂಧಾನ ನಡೆಸಿ, ಬಗೆಹರಿಸಿಕೊಳ್ಳುವಂತೆ ಹೇಳಿದೆ. ಆದಷ್ಟು ಶೀಘ್ರವೇ ಈ ಕುರಿತು ಸಂಧಾನ ಸಫಲವಾದರೆ ಸಂತಸ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ. ಆದರೆ, ಮಸೀದಿ ಸ್ವಲ್ಪ ದೂರ ನಿರ್ಮಾಣವಾದರೆ ಒಳ್ಳೆಯದು. ಒಂದೇ ಪ್ರದೇಶದಲ್ಲಿ ನಿರ್ಮಾಣ ಆಗುವುದರಿಂದ ಸಮಸ್ಯೆಗಳಾಗಲಿವೆ. ರಾಜಕೀಯವಾಗಿ ಅಯೋಧ್ಯೆ ವಿಚಾರ ಬಳಸಿಕೊಳ್ಳುವುದು ಸರಿಯಲ್ಲ. ಪ್ರತಿ ಚುನಾವಣೆಯಲ್ಲೂ ಈ ವಿಚಾರ ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ನಾನು ಸಾಕಷ್ಟು ಬಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ರಾಷ್ಟ್ರೀಯ ಹಿತ ಕಾಪಾಡುವ ಚುನಾವಣೆಯಾಗಲಿ. ಹಿಂದೂ ಧರ್ಮಕ್ಕೆ ಯಾವುದೇ ಅನ್ಯಾಯವಾಗದಂತೆ ಚುನಾವಣೆ ನಡೆಯಬೇಕು ಎಂದು ತಿಳಿಸಿದರು.