ಹುಬ್ಬಳ್ಳಿ: ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆ ಸ್ಪೀಕರ್ ಅಂಗೀಕಾರ ಮಾಡಬೇಕು. ಆಗಲಾದರೂ ರಾಜೀನಾಮೆ ನೀಡಿ ಹೆದರಿಸುವ ತಂತ್ರ ನಿಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇರೋದು ಸ್ಪಷ್ಟವಾಗಿದೆ. ವಿಮಾನ, ಬಂಗಲೆ ಎಲ್ಲವೂ ಅವರದೇ ಆಗಿವೆ. ಹೀಗಾಗಿ ಮೈತ್ರಿ ಸರ್ಕಾರ ಬೀಳಿಸುವ ತಂತ್ರ ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈಗ ಸಿಎಂ ಹುದ್ದೆ ಬದಲಾವಣೆ ಮಾಡೋದು ಸರಿಯಲ್ಲ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆದರೂ ಸಮಸ್ಯೆ ಬಗೆಹರಿಯುವುದಿಲ್ಲ. ಇದರಲ್ಲಿ ಸಿದ್ದರಾಮಯ್ಯ ಅವರ ಕೈವಾಡವಿಲ್ಲ. 10 ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದರೆ, ಅವರ ಬಣ್ಣ ಬಯಲಾಗುತ್ತದೆ. ಕಿರಿಕಿರಿ ಮಾಡುವವರಿಗೆ ಸರಿಯಾಗಿ ರಾಜೀನಾಮೆ ಪಡೆಯುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಅತೃಪ್ತ ಶಾಸಕರ ವಿರುದ್ಧ ಕಿಡಿಕಾರಿದರು.