ಹುಬ್ಬಳ್ಳಿ: ಧಾರವಾಡದ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಭಾನುವಾರ ಬೆಳಗ್ಗೆ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದರು. ಈ ಬೆನ್ನಲ್ಲೇ ಇದೀಗ ಕಲಘಟಗಿಯಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಕಲಘಟಗಿ ತಾಲೂಕಿನ ದೇವರ ಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ಚಿರತೆ ಪ್ರತ್ಯಕ್ಷವಾಗಿದ್ದು ಅರಣ್ಯ ಇಲಾಖೆ ಚಿರತೆ ಇರುವುದನ್ನು ಖಚಿತಪಡಿಸಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಅಂಚಟಗೇರಿ ಬಳಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮತ್ತೆ ಪ್ರತ್ಯಕ್ಷವಾಗಿದೆ.
ಇನ್ನು ನಗರದ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಇದೇ ಚಿರತೆ ಅಲ್ಲಿಗೆ ಹೋಗಿದೆಯಾ? ಎಂದು ಅರಣ್ಯ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಚಿರತೆ ಸೆರೆಗೆ ಬೋನು ಇಡಲಾಗಿದೆ. ಜೊತೆಗೆ ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.