ಹುಬ್ಬಳ್ಳಿ : ಅನ್‌ಲಾಕ್ ಎರಡನೇ ದಿನವಾದ ಇಂದು ಸಾರ್ವಜನಿಕ ಸಾರಿಗೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗ್ರಾಮೀಣ ವಿಭಾಗದಿಂದ 192 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಹೈದರಾಬಾದ್, ಬೆಂಗಳೂರು, ಕಲಬುರಗಿಗೆ ರಾತ್ರಿ ರಾಜಹಂಸ, ಸ್ಲೀಪರ್ ಬಸ್‌ಗಳನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ.
ಸಾರಿಗೆ ಸೇವೆ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗ್ಗೆ 6 ಗಂಟೆಯಿಂದಲೇ ಜನರು ಬಸ್ ನಿಲ್ದಾಣಗಳ ಕಡೆ ಬರತೊಡಗಿದರು. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು 192ಕ್ಕೆ ಹೆಚ್ಚಿಸಲಾಯಿತು. ಮೊದಲ ದಿನ 127 ಬಸ್‌ಗಳು ಸಂಚರಿಸಿದವು. 2ನೇ ದಿನ ಪ್ರಯಾಣಿಕ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ರಾಜ್ಯದಿಂದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸಾರ್ವಜನಿಕ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಹಗಲಿನಲ್ಲಿ ಎರಡು ವೇಗದೂತ ಮತ್ತು ರಾತ್ರಿ ಒಂದು ರಾಜಹಂಸ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಬೆಳಗ್ಗೆ 7ಕ್ಕೆ ಹೊರಡುವ ವೇಗದೂತ ಬಸ್ ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬನಗರ, ಜಡ್‌ಚರ್ಲ ಮಾರ್ಗವಾಗಿ ಹೋಗುತ್ತದೆ.
ಬೆಳಗ್ಗೆ 8ಕ್ಕೆ ಹೊರಡುವ ವೇಗದೂತ ಬಸ್ ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬನಗರ, ಜಡ್‌ಚರ್ಲ ಮಾರ್ಗವಾಗಿ ಹೋಗುತ್ತದೆ. ಈ ಬಸ್‌ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತದೆ.
ಇದನ್ನೂ ಓದಿ: ನಾಳೆಯಿಂದ ಬಿಗ್ಬಾಸ್ ಸೀಸನ್-8 ಸೆಕೆಂಡ್ ಇನ್ನಿಂಗ್ಸ್ ಆರಂಭ!!
ರಾತ್ರಿ ಸಾರಿಗೆ ಐಷಾರಾಮಿ ಬಸ್..
ಹೈದರಾಬಾದ್‌ಗೆ ರಾತ್ರಿ 7-30ಕ್ಕೆ ರಾಜಹಂಸ ಬಸ್ ಸಂಚರಿಸುತ್ತದೆ. ಬೆಂಗಳೂರಿಗೆ ರಾತ್ರಿ 7.30ಕ್ಕೆ ರಾಜಹಂಸ ಮತ್ತು 8.30ಕ್ಕೆ ನಾನ್ ಎಸಿ ಸ್ಲೀಪರ್ ಹಾಗೂ ಕಲಬುರಗಿಗೆ ರಾತ್ರಿ 10.30ಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸುತ್ತವೆ. ಈ ಬಸ್‌ಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ. ಐಶಾರಾಮಿ ಬಸ್‌ಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.