ಹುಬ್ಬಳ್ಳಿ : ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 65 ಸಾವಿರ ರೂ. ನಗದು ಹಾಗೂ ಮಹತ್ವದ ದಾಖಲೆಗಳಿದ್ದ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
ನಗರದ ಕಮರಿಪೇಟೆ ನಿವಾಸಿ ಸೀರೆ ವ್ಯಾಪಾರಿ ಶ್ರೀನಿವಾಸ ಹಬೀಬ ಎಂಬುವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಗ್ರಾಮಾಂತರ 3ನೇ ಘಟಕದ F3110 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಬಂದಿದ್ದಾರೆ. ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಇತರೆ ಲಗೇಜ್ನೊಂದಿಗೆ ಇಳಿಯುವಾಗ ನಗದು ಹಾಗೂ ಮಹತ್ವದ ದಾಖಲೆಗಳಿದ್ದ ಒಂದು ಬ್ಯಾಗ್ ಅನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟಿದ್ದಾರೆ.
ಸದರಿ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿದ ಚಾಲಕ ಜಗದೀಶ ಹಾಗೂ ನಿರ್ವಾಹಕಿ ಎಸ್.ವಿ.ಹಳ್ಳಿಕಟ್ಟಿಮಠ ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದ ನಂತರ ಬಸ್ ಅನ್ನು ನಿಲ್ದಾಣದಿಂದ ಘಟಕಕ್ಕೆ ತಂದು ದುರಸ್ಥಿ ಮಾಡಿಸಿಕೊಂಡು ಮತ್ತೆ ಬೆಳಗಾವಿಗೆ ಹೋಗಿ ಹುಬ್ಬಳ್ಳಿಗೆ ಬಂದಿದ್ದಾರೆ. ರಾತ್ರಿ 8ಕ್ಕೆ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ.
ಬಸ್ ಅನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ತಪಾಸಣೆ ಮಾಡುವುದು ಚಾಲಕ, ನಿರ್ವಾಹಕರ ಕೆಲಸ. ಎಂದಿನಂತೆ ತಪಾಸಣೆ ಮಾಡುವಾಗ ಒಂದು ಬ್ಯಾಗ್ ಇರುವುದನ್ನು ಗಮನಿಸಿದ್ದಾರೆ. ಅದನ್ನು ಘಟಕ ವ್ಯವಸ್ಥಾಪಕರಿಗೆ ಒಪ್ಪಿಸಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ₹65,520 ನಗದು, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮತ್ತಿತರ ಮಹತ್ವದ ದಾಖಲೆಗಳಿರುವುದು ಕಂಡು ಬಂದಿದೆ.
ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮ ಚಾಲಕ-ನಿರ್ವಾಹಕರ ಮೂಲಕ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಮರಳಿಸಲಾಯಿತು. ಪ್ರಯಾಣಿಕ ಶ್ರೀನಿವಾಸ ಹಬೀಬ ಮಾತನಾಡಿ, ಒಂದು ವಾರದ ವ್ಯಾಪಾರದ ಮೊತ್ತ ಹಾಗೂ ಮಹತ್ವದ ದಾಖಲೆಗಳ ಬ್ಯಾಗ್ ಕಳೆದಿದ್ದು ಬಹಳ ಬೇಸರ ಉಂಟು ಮಾಡಿತ್ತು. ಇಷ್ಟೊಂದು ಹಣ ಸಂಪಾದಿಸಲು ವರ್ಷಗಳು ಬೇಕಾಗುತ್ತಿತ್ತು. ಪೂರ್ತಿ ಹಣದೊಂದಿಗೆ ಎಲ್ಲ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕ-ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ, ಸದಾ ಸಾರ್ವಜನಿಕರ ನಡುವೆ ಕೆಲಸ ಮಾಡುವ ಚಾಲಕ ಮತ್ತು ನಿರ್ವಾಹಕರು ಸಂಸ್ಥೆಯ ರಾಯಭಾರಿಗಳಿದ್ದಂತೆ. ಇವರ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶ್ಲಾಘಿಸಿದ್ದಾರೆ.