ಹುಬ್ಬಳ್ಳಿ: ಕೋವಿಡ್ ಅಬ್ಬರ ಬಹುತೇಕ ತಗ್ಗಿದ್ದು, ಎಲ್ಲ ಚಟುವಟಿಕೆಗಳು ಮೊದಲಿನ ಸ್ಥಿತಿಗೆ ಬಂದಿದ್ದರೂ ವಾ.ಕ.ರ.ಸಾ.ಸಂಸ್ಥೆಯ ಸಿಬ್ಬಂದಿ ಮಾತ್ರ ಪೂರ್ಣ ಪ್ರಮಾಣದ ವೇತನಕ್ಕೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಕೊರೊನಾ ನೆಪ ಹಾಗೂ ಸರ್ಕಾರದಿಂದ ಫಂಡ್ ಬಂದಿಲ್ಲ ಎಂಬ ಕಾರಣಕ್ಕೆ ಪೂರ್ಣ ವೇತನ ಪಾವತಿಸಲು ಸಂಸ್ಥೆ ಹಿಂದೇಟು ಹಾಕುತ್ತಿದೆ. ಪರಿಣಾಮ ಕಡಿಮೆ ವೇತನದಲ್ಲಿಯೇ ಸಿಬ್ಬಂದಿ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ, ಈಗ ಮತ್ತೆ ಪುನಾರಂಭವಾಗಿದೆ. ಆದರೆ, ಮೊದಲಿನಂತೆ ಸಂಸ್ಥೆಯ ಬೊಕ್ಕಸಕ್ಕೆ ನಿರೀಕ್ಷಿಸಿದಷ್ಟು ಆದಾಯ ಬರುತ್ತಿಲ್ಲ. ಇದು ನೌಕರರ ವೇತನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸದ್ಯದಲ್ಲಿಯೇ ಆದಾಯ ಹೆಚ್ಚುವ ಸಂಭವವಿದ್ದು, ನೌಕರರ ಬಾಕಿ ವೇತನ ಪಾವತಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.
ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಶೇ.50ರಷ್ಟು ಮಾತ್ರ ವೇತನ ಪಾವತಿಸಲಾಗಿದೆ. ಉಳಿದಿದ್ದನ್ನು ಮುಂದೆ ಪಾವತಿಸುವುದಾಗಿ ಹೇಳಲಾಗಿದೆ. ಮಕ್ಕಳ ಫೀ, ಕುಟುಂಬ ನಿರ್ವಹಣೆ ಹಾಗೂ ಸಾಲದ ಕಂತುಗಳನ್ನು ಶೇ.50ರಷ್ಟು ವೇತನದಲ್ಲಿ ಹೇಗೆ ಭರಿಸಲು ಸಾಧ್ಯ? ಎಂಬುದು ನೌಕರರ ಪ್ರಶ್ನೆಯಾಗಿದೆ.
ಜತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಯಾವುದೇ ನೌಕರರಿಗೂ ಅರ್ಧದಷ್ಟು ವೇತನವನ್ನು ಸಹ ಸಂಸ್ಥೆ ಪಾವತಿಸಿಲ್ಲ. ಬದಲಾಗಿ ಬಾಕಿ ಉಳಿದಿರುವ ಎಲ್ಲ ವೇತನವನ್ನು ಒಂದೇ ಬಾರಿಗೆ ಪಾವತಿಸುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಸಮಯಕ್ಕೆ ಬಾರದ ವೇತನಕ್ಕೆ ಸಿಬ್ಬಂದಿ ಕಾಯುವಂತಾಗಿದೆ.