ಹುಬ್ಬಳ್ಳಿ : ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಕಾರ್ಯಕಾರಿಣಿ ಚಾಲನೆಗೂ ಮುನ್ನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಗೋಪೂಜೆ, ಧ್ವಜಾರೋಹಣ ನೆರವೇರಿಸಿದರು.
ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಬೇಕಿದ್ದ ಸಮಾರಂಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರುವುದು ವಿಳಂಬವಾದ ಕಾರಣ ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ರಾಷ್ಟ್ರೀಯ ಉಪಾಧ್ಯಕ್ಷೆ ಅರುಣಾ, ಸಚಿವರಾದ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಸುಧಾಕರ್, ಕೆ ಎಸ್ ಈಶ್ವರಪ್ಪ, ಎಸ್ ಟಿ ಸೋಮಶೇಖರ್, ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ, ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್‌ಕುಮಾರ್, ಸಂಸದ ಸದಾನಂದಗೌಡ, ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ, ಬೆಳಗಾವಿ ಪರಿಷತ್ ಕ್ಷೇತ್ರ, ಹಾನಗಲ್ ವಿಧಾನಸಭೆ ಉಪಚುನಾವಣೆ ಸೋಲು, ಸಿಎಂ ಬದಲಾವಣೆ ವಿಷಯವೂ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚೆಯಾಗುವ ಸಾಧ್ಯತೆ ಇದೆ.
ಕಾರ್ಯಕಾರಿಣಿಗೆ ಕೇಸರಿ ನಾಯಕರಲ್ಲಿ ಕಾಣದ ಉತ್ಸಾಹ : ಕಾರ್ಯಕಾರಣಿಗೆ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಬಹುತೇಕ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಗೈರಾಗಿರುವುದು ಕಾರ್ಯಕಾರಣಿ ಬಗ್ಗೆ ನಾಯಕರಲ್ಲಿನ ನಿರುತ್ಸಾಹ ತೋರಿಸುತ್ತಿದೆ.
ಬೆಳಗಾವಿ ಭಾಗದ ನಾಯಕರಾದ ಜಾರಕಿಹೊಳಿ ಸಹೋದರರು ಗೈರಾಗಿದ್ದು, ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಇತ್ತ ಮುಖ ಮಾಡಿಲ್ಲ. ಕಾರ್ಯಕಾರಿಣಿಯಲ್ಲಿ ಬೆಳಗಾವಿ ಪರಿಷತ್ ಚುನಾವಣೆಯ ಫಲಿತಾಂಶದ ಕುರಿತ ಪ್ರಮುಖ ಚರ್ಚೆ ನಡೆಯಲಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದರು.
ಸಭೆಯಲ್ಲಿ ಸೋಲಿನ ಪರಾಮರ್ಶೆ ನಡೆಯಲಿದೆ. ಸಮಿತಿ ರಚಿಸಿ ಕ್ರಮಕೈಗೊಳ್ಳೋದಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ. ಆದ್ರೆ, ಜಾರಕಿಹೋಳಿ ಬ್ರದರ್ಸ್ ಗೈರು ಎದ್ದು ಕಾಣುತ್ತಿದೆ.
ಎಲ್ಲೂ ಕಾಣದ ಯಡಿಯೂರಪ್ಪ ಕುಟುಂಬ : ಬಿಜೆಪಿ ಕಟ್ಟಿ ಬೆಳೆಸಿದವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ. ಆದರೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಯಡಿಯೂರಪ್ಪ ಪಕ್ಷದ ಪ್ರಮುಖ ಸಭೆ-ಸಮಾರಂಭಗಳಿಂದ ದೂರ ಉಳಿಯುತ್ತಿದ್ದಾರೆ. ಆದ್ರೆ, ಅವರ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ಗೈರಾಗಿದ್ದಾರೆ. ಯಡಿಯೂರಪ್ಪ ಇಡೀ ಕುಟುಂಬ ದುಬೈ ಟೂರ್‌ನಲ್ಲಿರೋದ್ರಿಂದ ಗೈರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದಶಕದ ನಂತರ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ, ಸಕಲ ಸಿದ್ಧತೆ