ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡಕ್ಕಾಗಿ ನಾವು ಘೋಷಣೆಯಡಿ ಆಯೋಜಿಸಿದ್ದ 'ಕನ್ನಡ ಗೀತಗಾಯನ ಕಾರ್ಯಕ್ರಮ'ವು ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜರುಗಿತು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, 'ಬಾರಿಸು ಕನ್ನಡ ಡಿಂಡಿಮವ', ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಧಾರವಾಡ ತಹಶೀಲ್ದಾರ್ ಡಾ.ಸಂತೋಷ ಬಿರಾದಾರ ಕಾರ್ಯಕ್ರಮದಲ್ಲಿ ನೆರೆದ ಸಾರ್ವಜನಿಕರಿಗೆ ಕನ್ನಡ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮ ಹಿನ್ನೆಲೆ ತಬಲಾ ವಾದಕ ಅನೀಲ್ ನೇತೃತ್ವದ ತಂಡ ಸಂಗೀತ ಸಂಯೋಜನೆ ನೀಡಿತು.
ಈ ವೇಳೆ, ಮಾಜಿ ಶಾಸಕ ಹಾಗು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡ ಹೋರಾಟಗಾರರಾದ ಬಿ.ಕೆ. ಹೊಂಗಲ್, ನಿಂಗಣ್ಣ ಕುಂಟಿ ಮಹಾನಗರ ಪಾಲಿಕೆ, ವಿದ್ಯಾವರ್ಧಕ ಸಂಘ, ಸಮಾಜ ಕಲ್ಯಾಣ ಇಲಾಖೆ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು