ಹುಬ್ಬಳ್ಳಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಆವರಣದಲ್ಲಿಂದು ಕರ್ನಾಟಕ ಕಳಸಾ ಬಂಡೂರಿ ರೈತರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರಾಷ್ಟ್ರವ್ಯಾಪಿ 'ರೈಲು ತಡೆ ಚಳವಳಿ'ಗೆ ರೈತ ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟಿಸಿದ ರೈತರು, ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಿಂದ ರೈತರು ಅಕ್ಷರಶಃ ನಲುಗಿ ಹೋಗುವಂತಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ರೈತರಿಗೆ ಅನ್ಯಾಯ ಎಸುಗುತ್ತಿದೆ. ದೆಹಲಿಯಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿ ಜಾಣಮೌನ ವಹಿಸಿರುವುದು ಖಂಡನೀಯ ಎಂದರು.
ರೈತರನ್ನು ತಡೆದ ಪೊಲೀಸರು
ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ನಡೆಸಲು ಬಂದ ರೈತರಿಗೆ ಪೊಲೀಸರು ಅಡ್ಡಿಪಡಿಸಿದ್ದು, ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ವಗ್ವಾದ ನಡೆಯಿತು.
ಪ್ರತಿಭಟನಾಕಾರರನ್ನು ರೈಲ್ವೆ ನಿಲ್ದಾಣದ ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದ್ದು, ನೀವು ರೈತರ ಪರವೋ ಅಥವಾ ಮೋದಿ ಪರವೋ ಎಂದು ಹೋರಾಟಗಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್ಪಿಎಫ್ ಪೊಲೀಸರು, ನಾವು ಜನರ ಪರ. ಆದರೆ ಒಳಗಡೆ ಹೋಗಲು ಅವಕಾಶ ಕೊಡಲ್ಲ ಎಂದರು.