ಹುಬ್ಬಳ್ಳಿ : ಹೋಳಿ ಹಬ್ಬ, ರಂಗಪಂಚಮಿ ಅಂಗವಾಗಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಸಮಿತಿ ವತಿಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿನ್ನೆ ಜಗ್ಗಲಗಿ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಳೆದ ಎಂಟು ವರ್ಷಗಳಿಂದಲೂ ಆಯೋಜನೆ ಮಾಡುತ್ತಾ ಬಂದಿರೋ ಈ ಜಗ್ಗಲಗಿ ಹಬ್ಬ ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿತ್ತು. ಆದರೆ, ಈ ಬಾರಿ ಕೋವಿಡ್ನ ತೀವ್ರತೆಯಿಂದ ಕೊಂಚ ಇಳಿಮುಖವಾದ ಹಿನ್ನೆಲೆ ಮತ್ತೆ ಜಗ್ಗಲಗಿ ಹಬ್ಬಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ವಿವಿಧ ಮಠಾಧೀಶರಿಂದ ನಗರದ ಮೂರು ಸಾವಿರ ಮಠದ ಶಾಲಾ ಆವರಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮಹಿಳೆಯರು, ಪುರುಷರು ಯಾವುದೇ ಡಿಜೆ ಸದ್ದಿಗೆ ಹೆಜ್ಜೆ ಹಾಕದೇ ಕಿವಿಗೆ ಇಂಪು ನೀಡುವಂತಹ ಕೇವಲ ಚರ್ಮ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕೋ ಮೂಲಕ ವಿಶಿಷ್ಠ ಕಲೆಯನ್ನ ಮತ್ತೆ ಅನಾವರಣಗೊಳಿಸಿದರು. ಕಾರ್ಯಕ್ರಮ ಉತ್ತರ ಕರ್ನಾಟಕ ಭಾಗದ ಕಲೆಯನ್ನು ಮತ್ತೆ ನೆನಪಿಸುವಂತೆ ಮಾಡಿತ್ತು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ದೇಶದ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿದೆ ಈ ಜಗ್ಗಲಗಿ ಹಬ್ಬ. ಯುವಕರಲ್ಲಿ ಹೆಚ್ಚು ಉತ್ಸಾಹ ತುಂಬಿ, ಸಮಾಜದ ಸಂಘಟನೆಗೆ ಶಕ್ತಿ ನೀಡುವ ಕೆಲಸವನ್ನು ಇಂತಹ ಪಾರಂಪರಿಕ ಹಬ್ಬಗಳು ಮಾಡುತ್ತವೆ ಎಂದರು.
ಕಾರ್ಯಕ್ರಮ ಆಯೋಜಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆಧುನಿಕ ಜೀವನದ ಭರದಲ್ಲಿ ಯಾವ ಕಲೆಯೂ ನಶಿಸಿ ಹೋಗಬಾರದು. ಅಂತಹ ಕಲೆಗೆ ಪುನರ್ಜೀವ ಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಚರ್ಮವಾದ್ಯಕ್ಕೆ ವಿಶೇಷವಾದ ಪ್ರಾಧಾನ್ಯತೆಯನ್ನು ಕೊಟ್ಟು ಗ್ರಾಮೀಣ ಸೊಗಡನ್ನು ಬಿತ್ತರಿಸುವಂತೆ ಆಯೋಜಿಸಲಾಗಿದೆ ಎಂದರು.
ಈ ಪರಂಪರೆಯ ಕಲೆಗಳು ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಈ ಜಗ್ಗಲಗಿ ಹಬ್ಬಕ್ಕೆ ಮತ್ತೆ ಕಳೆ ಬರುವಂತೆ ಆಯೋಜನೆ ಮಾಡಲಾಗಿದೆ. ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ಗೋವಾ ಸೇರಿದಂತೆ ವಿವಿಧ ಭಾಗಗಳಿಂದ 35ಕ್ಕೂ ಅಧಿಕ ವಿವಿಧ ವಾದ್ಯ ತಂಡಗಳು ಗೊಂಬೆ ಕುಣಿತ, ಡೊಳ್ಳು ಕುಣಿತ, ಹಲಗೆ ಕುಣಿತ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿ ಚರ್ಮ ವಾದ್ಯ, ವಿವಿಧ ವಾದ್ಯಗಳನ್ನ ಬಾರಿಸುವ ಮೂಲಕ ಮೆರಗು ತಂದರು. ಇನ್ನು ಮಹಿಳೆಯರು ಹಾಗೂ ಮಕ್ಕಳು ಹಲವು ವಾದ್ಯಗಳನ್ನ ಬಾರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಗಮನ ಸೆಳೆದರು.