ಧಾರವಾಡ: ಕಾಂಗ್ರೆಸ್ ಮುಖಂಡರೊಬ್ಬರ ಆಪ್ತ ಹಾಗೂ ಗುತ್ತಿಗೆದಾರ ಧಾರವಾಡದ ಶೆಟ್ಟಿ ಬ್ರದರ್ಸ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ತಡರಾತ್ರಿಯಾದರೂ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಧಾರವಾಡ ನಗರದ ದಾಸನಕೊಪ್ಪ ಸರ್ಕಲ್‌ನಲ್ಲಿರುವ ನಿವಾಸಕ್ಕೆ ಗೋವಾದಿಂದ ಬಂದಿರುವ ಐಟಿ ಅಧಿಕಾರಿಗಳು ದಾಖಲೆಗಳ ಶೋಧ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಉಪ್ಪುಂದ, ಬೈಂದೂರಿನಲ್ಲಿರುವ ಆಸ್ತಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 12 ಗಂಟೆಗಳಿಂದ ಪರಿಶೀಲನೆ ಕಾರ್ಯ ನಡೆದಿದ್ದು,ದಾಸನಕೊಪ್ಪ ವೃತ್ತದ ಬಳಿ ಯು.ಬಿ. ಶೆಟ್ಟಿ ಮನೆ ಹಾಗೂ ವಿನಾಯಕ ನಗರದಲ್ಲಿರುವ ಸೀತಾರಾಮ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಆಸ್ತಿ ವಿವರ ಕಲೆ ಹಾಕುತ್ತಿದ್ದಾರೆ.
ಉದ್ಯಮಿ ಯು.ಬಿ ಶೆಟ್ಟಿ, ಸೀತಾರಾಮ್ ಶೆಟ್ಟಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಆಪ್ತರು ಎನ್ನಲಾಗುತ್ತಿದೆ.
ಇದನ್ನೂ ಓದಿರಿ: ಧಾರವಾಡ: ಕಾಂಗ್ರೆಸ್ ಮುಖಂಡನ ಆಪ್ತನ ಮನೆ ಮೇಲೆ ಐಟಿ ದಾಳಿ
ದಾಳಿ ವೇಳೆ ರಾಶಿಗಟ್ಟಲೇ ದಾಖಲೆ ಪತ್ರಗಳ ಪರಿಶೀಲನೆ ಹಾಗೂ ಇಬ್ಬರಿಗೂ ಸಂಬಂಧಿಸಿದ ಆಸ್ತಿ ಪತ್ರಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೀತಾರಾಮ್ ಶೆಟ್ಟಿಗೆ ಸೇರಿದ ಗೃಹ ಕಚೇರಿಯಲ್ಲಿ ಪರಿಶೀಲನೆ ಕಾರ್ಯ ನಡೆದಿದೆ. 20ಕ್ಕೂ ಹೆಚ್ಚು ಅಧಿಕಾರಿಗಳಿಂದ ನಿರಂತರ ಪರಿಶೀಲನೆ ನಡೆಯುತ್ತಿದೆ.ಬೇರೆ ಬೇರೆ ಕಡೆಗಳಿಂದ ದಾಖಲೆ ಪತ್ರಗಳನ್ನು ಪತ್ತೆ ಮಾಡಿರುವ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಬೆನ್ನಲ್ಲೇ ಈ ದಾಳಿ ನಡೆದಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.