ಹುಬ್ಬಳ್ಳಿ : ವಾಣಿಜ್ಯನಗರಿ ಮತ್ತು ಪೇಡಾನಗರಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿವೆ. ಹುಬ್ಬಳ್ಳಿ-ಧಾರವಾಡ ಬೆಳೆದಂತೆಲ್ಲಾ ಕಟ್ಟಡಗಳು ಸಹ ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿವೆ.
ಆದರೆ, ಪಾಲಿಕೆಯ ಪರವಾನಿಗೆ ಪಡೆದು ನಿರ್ಮಾಣವಾಗಬೇಕಿದ್ದ ಕಟ್ಟಡಗಳು ತಮಗೆ ಬೇಕಾದ ಹಾಗೆ ನಿರ್ಮಾಣವಾಗುತ್ತಿವೆ. ಪರವಾನಿಗೆ ಸಹ ಪಡೆಯದೆ ಇರುವುದು ಸದ್ಯ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಸಹ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. 324 ಕಟ್ಟಡಗಳಲ್ಲಿ ಈವರೆಗೆ ತೆರವುಗೊಳಿಸಿರುವುದು ಕೇವಲ 31 ಕಟ್ಟಡಗಳನ್ನ ಮಾತ್ರ.
2019ರಲ್ಲಿ ಧಾರವಾಡದಲ್ಲಿ ನಡೆದ ದುರಂತ ಇನ್ನೂ ಕಣ್ಮುಂದೆಯೇ ಇದೆ. ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡದಿಂದ ಅಂದು 17ಕ್ಕೂ ಹೆಚ್ಚು ಸಾವುಗಳಾಗಿ ಹಲವಾರು ಜನ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಆದರೂ ಸಹ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅದ್ಯಾಕೋ ತೆರವು ಕಾರ್ಯಾಚರಣೆಗೆ ಮೀನಾಮೇಷ ಎನಿಸುತ್ತಿದೆ.
2019ರ ದುರಂತದ ಬಳಿಕ ಅಕ್ರಮ ಕಟ್ಟಡಗಳ ಮೇಲೆ ನಿಗಾ ಇಡ್ತೀವಿ, ಅವುಗಳ ತೆರವಿಗೆ ಮುಂದಾಗ್ತೀವಿ ಅಂತಾ ಹೇಳಿದ್ದ ಅಧಿಕಾರಿಗಳು ಸದ್ಯ ಇನ್ನೂ ಸಹ ಅದರ ವಿರುದ್ಧದ ಕ್ರಮಕ್ಕೆ ಮುಂದಾಗಿಲ್ಲ.
ಅಕ್ರಮ ಕಟ್ಟಡಗಳಲ್ಲಿ ಪ್ರಭಾವಿಗಳ ಪಾಲು ಸಹ ಇವುದರಿಂದ ಅಂತಹ ಕಟ್ಟಡಗಳನ್ನು ಅಧಿಕಾರಿಗಳು ಪರಿಶೀಲನೆಗೆ ಮುಂದಾಗದೆ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದು ದೊಡ್ಡ ಅವಘಡ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಅನಧಿಕೃತ ಕಟ್ಟಡಗಳ ತೆರವಿಗೆ ಮುಂದಾಗಬೇಕಿದೆ.