ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟದ ವಸ್ತುವಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಲಿಂಗಾಯುತರ ಮೇಲೆ ನಡೆಯುವ ಚುನಾವಣೆಯಲ್ಲ. ದೇಶದ ಆಡಳಿತ ವೈಫಲ್ಯದ ವಿರುದ್ಧ ನಡೆಯುವ ಚುನಾವಣೆ. ವೈಚಾರಿಕ ಭಿನ್ನತೆಗಳನ್ನ ನಾವು ಬಗೆಹರಿಸಿಕೊಳ್ಳುತ್ತೇವೆ. ಧರ್ಮದ ವಿಚಾರ ಕಾಂಗ್ರೆಸ್ಗೆ ಸಂಬಂಧವಿಲ್ಲ. ಲಿಂಗಾಯತ ಧರ್ಮದ ಬಗ್ಗೆ ನಾನು ಈಗ ಮಾತನಾಡಲ್ಲ. ಡಿ.ಕೆ.ಶಿವಕುಮಾರ ಹೇಳಿಕೆಗೆ ನಿನ್ನೆ ಸ್ಪಷ್ಟನೆ ನೀಡಿದ್ದೇನೆ. ಚುನಾವಣೆ ನಂತರ ಬನ್ನಿ ನಾನು ಉತ್ತರ ಕೊಡುತ್ತೇನೆ ಎಂದರು.
ಎ.ಎಸ್.ಪಾಟೀಲ್ ನಡಹಳ್ಳಿಯವರು ಎಲುಬಿಲ್ಲದ ನಾಲಿಗೆ ಥರ ಮಾತಾಡ್ತಾರೆ. ಇವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಅರೆ ಹುಚ್ಚನ ಥರ ಮಾತನಾಡಿದರೆ ಹೀಗೆ ಆಗುತ್ತದೆ. ನಡಹಳ್ಳಿ ದಾಳಿಯಲ್ಲಿ ನನ್ನ ಬೆಂಬಲಿಗರು ಇಲ್ಲ ಅಂತಾ ಹೇಳಲ್ಲ. ಆದ್ರೆ ನನಗೆ ಅದಕ್ಕೆ ಸಂಬಂಧವಿಲ್ಲ. ಸಾರಾಯಿ ಕುಡಿದವರ ಹಾಗೆ ನಡಹಳ್ಳಿ ವರ್ತಿಸುತ್ತಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಈ ಕುರಿತು ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಗಿಮಿಕ್ ಮಾಡುತ್ತಿದ್ದಾರೆ. ಕಪ್ಪು ಹಣ ತರಲು ಮೋದಿಯಿಂದ ಸಾಧ್ಯವಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂತಾ ಹೇಳಿದ್ರು. ಆದ್ರೆ ಉದ್ಯೋಗ ಸೃಷ್ಟಿ ಆಗಲಿಲ್ಲ. 2 ಸಾವಿರ ನೋಟು ಪ್ರಿಂಟ್ ಮಾಡಿದ್ದು, ಒಂದೇ ವಿಮಾನದಲ್ಲಿ ನೀರವ್ ಮೋದಿ, ಲಲಿತ್ ಮೋದಿಗೆ ತೆಗೆದುಕೊಂಡು ಹೋಗಲು ಅನುಕೂಲವಾಗಲೆಂದು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.