ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕೊಲೆ, ಚಾಕು ಇರಿತ ಪ್ರಕರಣ ಮಾಸುವ ಮುನ್ನವೇ ಮೀಟರ್ ಬಡ್ಡಿ ಹಾವಳಿಯ ಪ್ರಕರಣ ಬೆಳಕಿಗೆ ಬರುತ್ತಿವೆ. ಆದರೆ, ಸೂಕ್ತ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಪ್ರಕರಣಗಳು ಧೂಳು ಹಿಡಿಯುತ್ತಿವೆ.
ಹೌದು.. ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆ ಅದೆಷ್ಟೋ ಕ್ರಮಗಳು ಕೈಗೊಂಡರೂ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಮತ್ತೆ ಮೀಟರ್ ಬಡ್ಡಿ ಕುಳಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಕೇಶ್ವಾಪುರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ.
ನಾಲ್ವರ ತಂಡ ಕೇಶ್ವಾಪುರ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ಎಳೆದಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ರೇಣು ಕಿರಣ ಮಾಗಡಿ (48) ಎಂಬ ಮಹಿಳೆಯ ಮನೆಗೆ ಏಕಾಏಕಿ ನುಗ್ಗಿ ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಬಳಿಕ ಮನೆಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯನ್ನು ಎಳೆದಾಡಿದ್ದು ಹಲ್ಲೆಗೆ ಕೂಡಾ ಮುಂದಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಪ್ರಕರಣ ದಾಖಲಾಗಿ ಸುಮಾರು ದಿನಗಳು ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸಲು ಮಾತ್ರ ಸಾಧ್ಯವಾಗಿಲ್ಲ. ಈ ಪ್ರಕರಣದ ಪ್ರಮುಖ ಆರೋಪಿಗಳು ಗೋವಾಕ್ಕೆ ಎಸ್ಕೇಪ್ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಿದ್ದರೂ ಪೊಲೀಸರು ಮೌನ ವಹಿಸಿದ್ದು, ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.
ನಗರದ ಕುಖ್ಯಾತ ಬಡ್ಡಿಕುಳರಾದ ವಿದ್ಯಾನಗರ ನಿವಾಸಿ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ, ಅನಿಲ ಮೆಹರವಾಡೆ, ನಾರಾಯಣ ಮೆಹರವಾಡೆ ಎಂಬುವವರೇ ಹಲ್ಲೆ ನಡೆಸಿದವರಾಗಿದ್ದಾರೆ. ರೇಣು ಮಾಗಡಿ (48) ತಮ್ಮ ಮಕ್ಕಳೊಂದಿಗೆ ಮನೋಜ್ ಪಾರ್ಕ್ನಲ್ಲಿರುವ ಮನೆಯಲ್ಲಿ (ನಂ.116) ವಾಸಿಸುತ್ತಿದ್ದು, ಇವರ ಪತಿ ಕಿರಣ ಮಾಗಡಿ ಒಂದು ವರ್ಷದ ಹಿಂದೆ ಮೃತರಾಗಿದ್ದಾರೆ. ಈಗಾಗಲೇ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಮಾತ್ರ ಯಾವುದೇ ಕಾಳಜಿ ವಹಿಸದೇ ಇರುವುದು ನಿಜಕ್ಕೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಓದಿ: ಮೀಟರ್ ಬಡ್ಡಿ ಕಿರುಕುಳ: ಚಾಮರಾಜನಗರದಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!