ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿಯ ನೃತ್ಯತಂಡ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿನ ಮಯೂರಿ ನೃತ್ಯ ಅಕಾಡೆಮಿಯ 10 ಮಂದಿ ನೃತ್ಯ ಕಲಾವಿದರು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಭವ್ಯ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಹುಬ್ಬಳ್ಳಿಯ ಕೀರ್ತಿ ಹೆಚ್ಚಿಸಲಿದ್ದಾರೆ.
ಕರ್ನಾಟಕದಿಂದ ಒಟ್ಟು 37 ನೃತ್ಯಗಾರರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಉಡುಪಿ ಫೀಟ್ಸ್, ಬೆಂಗಳೂರಿನ ನಾಟ್ಯೇಶ್ವರ ನೃತ್ಯ ಶಾಲೆ ಹಾಗೂ ಹುಬ್ಬಳ್ಳಿಯ ಮಯೂರಿ ನೃತ್ಯ ಅಕಾಡೆಮಿಯ ಒಟ್ಟು 37 ನೃತ್ಯ ಪಟುಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಒಟ್ಟು 480 ನೃತ್ಯ ಕಲಾವಿದರು ನೃತ್ಯ ಮಾಡಲಿದ್ದಾರೆ. ಈಗಾಗಲೇ ಆಯ್ಕೆಯಾದ ತಂಡಗಳು ನವದೆಹಲಿಗೆ ತಲುಪಿದ್ದು, ಅಲ್ಲಿಯ ಜನಪಥ ರಸ್ತೆಯಲ್ಲಿ ನೃತ್ಯ ಪ್ರದರ್ಶನ ನೀಡುವ ದಿಸೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಡುಪಿ ತಂಡ ಜನಪದ ನೃತ್ಯ ಪ್ರದರ್ಶನ ಮಾಡಿದರೆ, ಹುಬ್ಬಳ್ಳಿ ತಂಡ ಭರತನಾಟ್ಯ ಪ್ರದರ್ಶಿಸಲಿದೆ.
ಇದನ್ನೂ ಓದಿ: ಮಂಗಳೂರಿನ ಈ ಪದವಿ ವಿದ್ಯಾರ್ಥಿನಿಗೆ ಹಾವುಗಳೆಂದರೆ ಪ್ರೀತಿ.. 100ಕ್ಕೂ ಹೆಚ್ಚು ಸರೀಸೃಪ ರಕ್ಷಿಸಿದ ಯುವತಿ
ನೃತ್ಯ ತಂಡಗಳ ಆಯ್ಕೆ ಪ್ರಕ್ರಿಯೆ ಸುಲಭವಾಗಿರಲಿಲ್ಲ. ನಾಲ್ಕು ಹಂತದಲ್ಲಿ ಸ್ಪರ್ಧೆಗಳನ್ನು ಎದುರಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ. ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗದಿಂದ ಒಟ್ಟು 60 ತಂಡಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ನೃತ್ಯ ಗುರುಗಳು ನೃತ್ಯ ಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ