ಹುಬ್ಬಳ್ಳಿ: ನಿನ್ನೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿ ನಡುವಿನ ಸೇತುವೆ ಕಾಮಗಾರಿ ನಡೆಸುತ್ತಿದ್ದ ವೇಳೆ 9 ಜನ ಕಾರ್ಮಿಕರು ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯತ್ತಿದೆ.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವರುಣನ ಆರ್ಭಟಕ್ಕೆ ಸಾವಿರಾರು ಎಕರೆ ಬೆಳೆ ಕೊಚ್ಚಿ ಹೋಗಿದ್ದು, ಕುಂದಗೋಳ, ಹುಬ್ಬಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಶೇಂಗಾ, ಹತ್ತಿ, ಮೆಣಸಿನಕಾಯಿ, ಗೋವಿನಜೋಳದ ಬೆಳೆ ನೀರುಪಾಲಾಗಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಅಳಿದುಳಿದ ಬೆಳೆ ಈಗ ಮಳೆಗೆ ಹಾಳಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹುಬ್ಬಳ್ಳಿ-ಲಕ್ಷ್ಮೇಶ್ವರ ನಡುವಿನ ಸಂಚಾರ ಬಂದ್ ಆಗಿದೆ. ಕುಂದಗೋಳ ತಹಶೀಲ್ದಾರ್ ಕಾರ್ಯಾಲಯಕ್ಕೂ ನೀರು ನುಗ್ಗಿದ್ದು, ಕಚೇರಿಯ ಕೆಲಸ ಕಾರ್ಯಕ್ಕೆ ಅಡಚಣೆಯಾಗಿದೆ. ಅಷ್ಟೇ ಅಲ್ಲದೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಕೆರೆ 10 ವರ್ಷಗಳ ನಂತರ ಇದೀಗ ಭರ್ತಿಯಾಗಿದೆ.