ಹುಬ್ಬಳ್ಳಿ: ಈಗಾಗಲೇ ಲಾಕ್ಡೌನ್ನಿಂದ ಮಧ್ಯಮ ವರ್ಗ ಹಾಗೂ ಕೂಲಿ ಕಾರ್ಮಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕುಳಗಳು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ ಮೀಟರ್ ಬಡ್ಡಿ ಕುಳ ಗಿರಿಯಪ್ಪ ಎಂಬಾತ ಮಹಿಳೆಯೊಬ್ಬರಿಗೆ ಬಡ್ಡಿ ಹಣ ನೀಡದಿದ್ದಕ್ಕೆ ಧಮ್ಕಿ ಹಾಕಿದ್ದಾನೆ ಎನ್ನಲಾಗ್ತಿದೆ. ಮಹಿಳೆ ಈತನಿಂದ 80 ಸಾವಿರ ಹಣ ಪಡೆದುಕೊಂಡಿದ್ದರು. ಪ್ರತಿ ತಿಂಗಳು 8 ಸಾವಿರ ಬಡ್ಡಿ ಕಟ್ಟುತ್ತಾ ಬಂದಿದ್ದಾರೆ. ಮಹಿಳೆಯ ಪತಿ ಆಟೋ ನಡೆಸುತ್ತಿದ್ದು, ಲಾಕ್ಡೌನ್ನಿಂದ ಕೆಲಸ ನಿಂತು ಹೋಗಿದೆ. ಹೀಗಾಗಿ ಬಡ್ಡಿ ಕಟ್ಟಲು ಸಾಧ್ಯವಾಗಿಲ್ಲವಂತೆ.
ಆದರೆ ಬಡ್ಡಿ ಕಟ್ಟಲಿಲ್ಲ ಎಂದು ರೊಚ್ಚಿಗೆದ್ದ ಗಿರಿಯಪ್ಪ, ಮಹಿಳೆಗೆ ಫೋನ್ ಮಾಡಿ ಧಮ್ಕಿ ಹಾಕುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಕಿರುಕುಳ ತಾಳದೆ ಮಹಿಳೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಬಡ್ಡಿ ಹಣ ಕಟ್ಟಲು ಕಾಲಾವಕಾಶ ಕೊಡಿಸಿ ಎಂದು ಡಿಸಿಗೆ ಮನವಿ ಮಾಡಿದ್ದಾರೆ.