ಹುಬ್ಬಳ್ಳಿ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಹಚಡದ ಎಂಬುವರ ಮೇಲೆ ಯಲ್ಲಪ್ಪ ಬದ್ದಿ ಎಂಬಾತ ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಗೃಹ ಸಚಿವ ಬಸವರಾಜ ಬೊಮ್ಮಯಿ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಏನೇ ಅಪರಾಧ ಕೃತ್ಯಗಳು ನಡೆದರೂ ನೀವೇ ಜವಾಬ್ದಾರಿ ಎಂದು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿ, ದಿನ ಕಳೆಯುವುದರೊಳಗೆ ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ನಡೆದು ಮೂರು ದಿನಗಳಾದರೂ ಕಮರಿಪೇಟೆ ಪೊಲೀಸರು ಇನ್ನೂ ಪ್ರಕರಣ ದಾಖಲು ಮಾಡಿಲ್ಲ. ಹೀಗಾಗಿ ಅರುಣ ಹಚಡದ ಕುಟುಂಬ ಆತಂಕದಲ್ಲಿ ಜೀವನ ನಡೆಸುತ್ತಿದೆ.
ಕಮರಿಪೇಟೆಯ ದಿವಟೆಗಲ್ಲಿಯಲ್ಲಿನ ಅರುಣ ಹಚಡದ ಅವರ ಮನೆಯ ಪಕ್ಕ ಹೊಸದಾಗಿ ಮನೆ ನಿರ್ಮಿಸುತ್ತಿರುವ ಯಲ್ಲಪ್ಪ ಬದ್ದಿ ಎಂಬಾತ ಹಚಡದ ಮನೆಗೆ ನುಗ್ಗಿ ಗಲಾಟೆ ಆರಂಭಿಸಿದ್ದಾಗ ಗಾಬರಿಯಾದ ಅರುಣ, ಮನೆಯಲ್ಲಿದ್ದ ತಿಳಿಸಾರನ್ನು ಅವರ ಮೇಲೆ ಎಸೆದಿದ್ದಾನೆ. ಆಗ ಗೂಂಡಾಗಳನ್ನು ಕರೆದುಕೊಂಡು ಬಂದ ಯಲ್ಲಪ್ಪ ದೊಡ್ಡ ಬಡಿಗೆಯಿಂದ ಹಲ್ಲೆ ಮಾಡಿ, ಮನೆಯ ಕಿಟಿಕಿಗಳನ್ನ ಒಡೆದು ಹಾಕಿದ್ದಾನೆ. ಈ ಬಗ್ಗೆ ದೂರು ನೀಡಲು ಕಮರಿಪೇಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಳಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಲ್ಲೆಗೊಳಗಾಗಿರುವ ಅರುಣ ಆರೋಪಿಸಿದ್ದಾರೆ.
ಈ ಘಟನೆ ಬಗ್ಗೆ ಕಮರಿಪೇಟೆ ಪೊಲೀಸ್ ಇನ್ಸ್ ಪೆಕ್ಟರ್ಗೆ ಸಿಸಿಟಿವಿ ದೃಶ್ಯ ತೋರಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಮಗೆ ಜೀವ ಬೆದರಿಕೆಯಿದೆ. ತಮಗೆ ರಕ್ಷಣೆ ಜೊತೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ಅರುಣ ಹಚಡದ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.