ಹುಬ್ಬಳ್ಳಿ: ರಾಜ್ಯದಲ್ಲಿಯೇ ಶಿಸ್ತಿನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆಸರುವಾಸಿಯಾಗಿರುವ ಹು - ಧಾ ಪೊಲೀಸ್ ಕಮಿಷನರೇಟ್ ಈಗ ಅಪರೂಪದ ಪ್ರಕರಣದಲ್ಲಿ ಪೊಲೀಸರೇ ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ. ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಕುಳಿತು ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ.
ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಇನ್ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್ಟೇೆಬಲ್, ಓರ್ವ ಕಾನ್ಸ್ಟೇಬಲ್ ಹಾಗೂ ನಿವೃತ್ತ ಹೆಡ್ ಕಾನ್ಸ್ಟೇಬಲ್ ಒಳಗೊಂಡ ಐವರ ತಂಡ ಅಕ್ಷಯ ಕಾಲೋನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಮೇರೆಗೆ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ನಡೆಸಿತ್ತು.
ದಾಳಿಯಲ್ಲಿ ಸಿಎಆರ್‌ನ ಇಬ್ಬರು ಹೆಡ್ ಕಾನ್ಸ್ಟೇೆಬಲ್, ಒಬ್ಬ ನಿವೃತ್ತ ಕಾನ್ಸ್ಟೇೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್ಸ್ಟೇೆಬಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಆರ್ ಇನ್ಸ್ಪೆಕ್ಟರ್ ಪರಾರಿಯಾಗಿದ್ದಾರೆ. ಬಂಧಿತರಿಂದ 9 ಸಾವಿರ ರೂ. ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸುರತ್ಕಲ್ ಯುವಕ ಫಾಜಿಲ್ ಹತ್ಯೆ ಪ್ರಕರಣ: 21 ಮಂದಿ ಪೊಲೀಸರ ವಶಕ್ಕೆ