ಹುಬ್ಬಳ್ಳಿ: ಸ್ನೇಹಿತರೊಂದಿಗೆ ಆನ್‌ಲೈನ್ ಗೇಮ್ ಆಡಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ ಆತನ ಸ್ನೇಹಿತರೇ ಕಿಡ್ನಾಪ್ ಮಾಡಿ 1 ಕೋಟಿ ರೂ ಗೆ ಬೇಡಿಕೆ ಇಟ್ಟ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.
ಆನ್‌ಲೈನ್ ಗೇಮ್‌ನಲ್ಲಿ ಹಣ ಗೆದ್ದಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್ ನವಾಜ್ ಮುಲ್ಲಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಕಳೆದ ರಾತ್ರಿ ಬೆಳಗಾವಿಯ ಕಿತ್ತೂರು ಬಳಿ ಬಂಧಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಮುಲ್ಲಾ ಅವರನ್ನು ಆಗಸ್ಟ್ 6 ರಂದು ಅಪಹರಿಸಲಾಗಿತ್ತು.
ಆಗಸ್ಟ್ 6 ರಂದು ದಾಖಲಾಗಿದ್ದ ದೂರು: ಹುಬ್ಬಳ್ಳಿಯ ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಂ, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಬಂಧಿತ ಆರೋಪಿಗಳು. ಗರೀಬ್ ನವಾಜ್ ಕಿಡ್ನಾಪ್ ಆಗಿರುವ ಕುರಿತು ಆಗಸ್ಟ್ 6 ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ದಾಖಲಿಸಿದ್ದರು. ಅಪಹರಣಕಾರರು ಗರೀಬ್ ನವಾಜ್ ತಂದೆಗೆ ಕರೆ ಮಾಡಿ, ಒಂದು ಕೋಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದಿದ್ದಾಗ 15 ಲಕ್ಷ ನೀಡಬೇಕು, ಇಲ್ಲದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಹಣ ಗೆದ್ದಿದ್ದು ಹೇಗೆ?: ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಗರೀಬ್ ನವಾಜ್ ಹಾಗೂ ಆತನ ಸ್ನೇಹಿತ ದಿಲ್ವಾರ್, ಆನ್ಲೈನ್ನಲ್ಲಿ ಕ್ಯಾಸಿನೋ ಗೇಮ್ ಆಡಿ ಕೋಟ್ಯಂತರ ರೂ. ಸಂಪಾದಿಸಿದ್ದರು ಎನ್ನಲಾಗಿದೆ. ಸ್ನೇಹಿತರ ಜೊತೆ ಸೇರಿ ಬೇಕಾಬಿಟ್ಟಿಯಾಗಿ ಹಣ ವೆಚ್ಚ ಮಾಡುತ್ತಿದ್ದ. ಅಲ್ಲದೇ, ಅಷ್ಟೊಂದು ಹಣ ತನ್ನಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಆತನ ಸ್ನೇಹಿತ ಸಹ ಗರೀಬ್ ನವಾಜ್ ಖಾತೆಗೆ ಒಂದಷ್ಟು ಹಣ ವರ್ಗಾಯಿಸಿದ್ದ. ಈ ವಿಷಯ ತಿಳಿದ ಆರೋಪಿಗಳು ಗರೀಬ್ ಮತ್ತೊಬ್ಬ ಸ್ನೇಹಿತ ಮಹ್ಮದ್ ಆರೀಫ್ ಎಂಬುವನ ಸಹಾಯ ಪಡೆದು, ಗರೀಬ್ ನವಾಜ್ನನ್ನು ಗೋಕುಲ ರಸ್ತೆಯ ಡೆಕ್ಲಥಾನ್ ಬಳಿ ಅಪಹರಿಸಿದ್ದರು.
ಆರೋಪಿಗಳು ಬಲೆಗೆ ಬಿದ್ದಿದ್ದು ಹೇಗೆ?: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹುಬ್ಬಳ್ಳಿ ಧಾರವಾಡ ಕಮಿಷನರ್ ಲಾಬೂರಾಮ್ ಆರೋಪಿಗಳ ಬಂಧನಕ್ಕಾಗಿ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು. ಕಮಿಷನರ್ ಲಾಬೂರಾಮ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಶ್ಯಾಮರಾಜ ಸಜ್ಜನರ್, ಜಗದೀಶ್ ಹಂಚನಾಳ, ಜೆ.ಎಂ. ಕಾಲಿಮಿರ್ಚಿ ಮತ್ತು ರವಿಚಂದ್ರ ಬಡಾಫಕ್ಕೀರಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಅಪಹರಣಕಾರರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರೂ. 10 ಸಾವಿರಕ್ಕಾಗಿ ಮಹಿಳೆ ಕೊಲೆ.. ಬೆಂಗಳೂರು ಹತ್ಯೆ ಪ್ರಕರಣ ಆರೋಪಿಗಳು ಅರೆಸ್ಟ್