ಹುಬ್ಬಳ್ಳಿ: ಚುನಾವಣೆ ಬರ್ತಿದೆ ಎಂದು ಕಾಂಗ್ರೆಸ್ ರಾಜಕಾರಣ ಆರಂಭಿಸಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ಹಿಂದೆ ಸರ್ಕಾರ ನಡೆಸಿದವರು ಈಗ ಮೇಕೆದಾಟು ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ನಗರದಲ್ಲಿಂದು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮದ ನಂತರ ಮಾತಾನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕಾನೂನು ತೊಡಕುಗಳು ಇರುವುದರಿಂದ ವಿಳಂಬವಾಗಿದೆ. ಈ ವಿಚಾರವಾಗಿ ಎಲ್ಲರೂ ಒಂದು ಕಡೆ ಕುಳಿತು ಚರ್ಚೆ ಮಾಡಬೇಕು. ಎಲ್ಲರೂ ಸೇರಿ ಸರ್ವಸಮ್ಮತವಾದ ನಿರ್ಣಯ ಕೈಗೊಳ್ಳಬೇಕು ಅಂದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ.
ಅದರಲ್ಲಿಯೂ ತಮಿಳನಾಡು ವಿರುದ್ಧದ ಹೋರಾಟ ಮಾಡಿ ಜಾರಿಗೆ ತರಬೇಕು ಅಂದರೆ ಎಲ್ಲ ಪಕ್ಷಗಳ ಸಹಕಾರ ಅತ್ಯಗತ್ಯ. ಇದನ್ನು ರಾಜಕೀಕರಣ ಮಾಡಿದರೆ ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತವೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು
ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಎಂಬ ಅಭಿಪ್ರಾಯಕ್ಕೆ ಎಲ್ಲ ಪಕ್ಷಗಳೂ ಬದ್ಧವಾಗಿವೆ. ಕಾನೂನು ತೊಡಕು ನಿವಾರಿಸಿ ಇದನ್ನು ಅನುಷ್ಟಾನಕ್ಕೆ ಪ್ರಯತ್ನಿಸಬೇಕೇ ಹೊರತು ರಾಜಕೀಯ ಮಾಡುವುದು ಬೇಡ. ತಮ್ಮ ಸರ್ಕಾರ ಇದ್ದಾಗ ಡಿಪಿಆರ್ ಮಾಡಿರೋದಾಗಿ ಕಾಂಗ್ರೆಸ್‌ನವರು ಹೇಳ್ತಾರೆ.
ಹಾಗಾದರೆ ಆಗಲೇ ಏಕೆ ಯೋಜನೆ ಜಾರಿಗೆ ತರಲಿಲ್ಲ?, ಅವತ್ತು ಡಿಪಿಆರ್‌ಗೆ ಅಪ್ರೂವಲ್ ಸಿಗದಿದ್ದರೆ ಅಂದೇ ಏಕೆ ಪಾದಯಾತ್ರೆ ಮಾಡಲಿಲ್ಲ? ವಿರೋಧ ಪಕ್ಷದಲ್ಲಿದ್ದಾಗ ಒಂದು ನಡವಳಿಕೆ, ಆಡಳಿತ ಪಕ್ಷದಲ್ಲಿದ್ದಾಗ ಮತ್ತೊಂದು ನಡವಳಿಕೆ ಸರಿಯಲ್ಲ ಎಂದರು.
ಇನ್ನು ಕಾಂಗ್ರೆಸ್ ಪಾದಯಾತ್ರೆ ನಾಟಕ, ರಾಜಕೀಯ ಮಾಡೋದನ್ನು ನಿಲ್ಲಿಸಲಿ. ಚುನಾವಣೆ ಹತ್ತಿರ ಇದ್ದಾಗ ಈ ರೀತಿ ಮಾಡುತ್ತಿದ್ದಾರೆ. ಯಾಕೆ ಇಷ್ಟು ದಿನ ಮಲಗಿದ್ದರಾ ಇವರು? ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ
ಕೇಂದ್ರ ಸರ್ಕಾರ 15 ರಿಂದ 18 ವರ್ಷದ ಮಕ್ಕಳಿಗೆ ಇಂದಿನಿಂದ ಲಸಿಕಾ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳಿಗೆ ಮೊದಲ ಡೋಸ್ ನೀಡುವ ಮೂಲಕ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಅಭಿಯಾನದಲ್ಲಿ ಮೊದಲ ದಿನವೇ ಹುಬ್ಬಳ್ಳಿ- ಧಾರವಾಡ ನಗರದಲ್ಲಿ 20 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ ಎಂದು ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ: ಲಾಕ್ಡೌನ್ ಜಾರಿಯಾದರೂ ನಾವು ನಮ್ಮ ಪಾದಯಾತ್ರೆ ನಿಲ್ಲಿಸುವುದಿಲ್ಲ: ಸರ್ಕಾರಕ್ಕೆ ಡಿಕೆಶಿ ಸವಾಲು