ಹುಬ್ಬಳ್ಳಿ: ದೇಶದ ಅರ್ಥವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಕರ್ನಾಟಕದಲ್ಲಿ ಬಂಡವಾಳ ಹೂಡಲು ಅನೇಕ ಉದ್ಯಮಿಗಳು ಉತ್ಸುಕರಾಗಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಇಲ್ಲಿ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಅವರು, ಏಷ್ಯಾದ ರಾಷ್ಟ್ರ ಗಳಲ್ಲಿಯೇ ಅತೀ ಕಡಿಮೆ ಕಾರ್ಪೊರೇಟ್ ತೆರಿಗೆ ಹೊಂದಿರುವ ರಾಷ್ಟ್ರ ಭಾರತ. ಇಲ್ಲಿ ಶೇ.22ರಷ್ಟು ಮಾತ್ರ ಕಾರ್ಪೊರೇಟ್ ತೆರಿಗೆ ಇದೆ. 100 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ. 2025ರ ಹೊತ್ತಿಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಯಾದಗಿರಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ರಾಸಾಯನಿಕ ಮಂತ್ರಾಲಯದಿಂದ ಡ್ರಗ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸಿಪೆಟ್ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್, ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದರು.
ಕರ್ನಾಟಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಕರ್ನಾಟಕದ ವಾಣಿಜ್ಯ ಕೇಂದ್ರವಾಗಿ, ಹುಬ್ಬಳ್ಳಿ-ಧಾರವಾಡ ಗುರುತಿಸಿಕೊಂಡಿವೆ. ಈ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಅತಿದೊಡ್ಡ ಮಹಾನಗರ ಪ್ರದೇಶವಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು (ಎಚ್‌ಡಿಎಂಸಿ) ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಒಂದನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಈಗಾಗಲೇ ಸಾರ್ವಜನಿಕ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ, ಇ-ಆಡಳಿತ ಮತ್ತು ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಂತಹ ಅನೇಕ ಸ್ಮಾರ್ಟ್ ವ್ಯವಸ್ಥೆಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಕೈಗಾರಿಕಾ ಬೆಳವಣಿಗೆ ಬೆಂಬಲಿಸಲು ಮತ್ತು ಹೂಡಿಕೆ ಆಕರ್ಷಿಸಲು ಹುಬ್ಬಳ್ಳಿ ಧಾರವಾಡದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ 4 ಕೈಗಾರಿಕಾ ಎಸ್ಟೇಟ್ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ವ್ಯಾಪಾರ ಇನ್ಕ್ಯುಬೇಟರ್ ಮತ್ತು ಎಲ್ಲರನ್ನೂ ಒಳಗೊಂಡ ಕೌಶಲಕ್ಕೆ ಒತ್ತು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಾಟಾ ಹಿಟಾಚಿಯಂತಹ ಕಂಪನಿಗಳು ಹುಬ್ಬಳ್ಳಿ-ಧಾರವಾಡ ನಗರವನ್ನು ತಮ್ಮ ಮೂಲವಾಗಿ ಆಯ್ಕೆ ಮಾಡಿಕೊಂಡಿವೆ. ಉತ್ತರ ಕರ್ನಾಟಕದ ಔಷಧ ವಲಯವನ್ನು ಬೆಂಬಲಿಸಲು ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ 2 ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.