ಹುಬ್ಬಳ್ಳಿ: ಮೂರುಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ಹೀಗಾಗಿ ನಾನು ಮಠದ ಉಳಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಓದಿ: ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಿಡಿ
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ. ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ ಮೋಹನ್ ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೊತ್ತೇ ಇರಲಿಲ್ಲ ಎಂದರು.
ಸಿ.ಎಂ ಉದಾಸಿ, ಮೋಹನ್ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ. ದಿಂಗಾಲೇಶ್ವರ ಶ್ರೀ ಹೋರಾಟ ವ್ಯರ್ಥ ಪ್ರಯತ್ನ ಎಂದು ಲಿಂಬಿಕಾಯಿ ಹೇಳಿದ್ದಾರೆ. ಒಂದು ವೇಳೆ ಪ್ರಯತ್ನ ವ್ಯರ್ಥವಾದರೆ, 36 ವರ್ಷದಿಂದ ತೊಟ್ಟ ಕಾವಿ ಬಟ್ಟೆಯನ್ನು ಮಠದ ದ್ವಾರ ಬಾಗಿಲಿಗೆ ಹಾಕಿ ನಾನು ವಾಪಸ್ ಹೋಗುತ್ತೇನೆ ಎಂದರು.
ಓದಿ: ಸರ್ಕಾರದೊಂದಿಗೆ ಪ್ರತಿಪಕ್ಷದವರೂ ಸೇರಿ ಮೂರು ಸಾವಿರ ಮಠ ನಾಶ ಮಾಡಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ
ಮಠದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅವ್ಯವಹಾರ ಆಗಿಲ್ಲ ಎನ್ನುವದಾದರೆ ಮಠದ ಕತೃ ಗದ್ದುಗೆಗೆ ಬರಲಿ, ನಾನೂ ಬರುತ್ತೇನೆ. ಮಠದಲ್ಲಿಯೇ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ನನ್ನ ಹೋರಾಟಕ್ಕೆ ಮುನ್ನೂರು ಸ್ವಾಮೀಜಿಗಳು ಬೆಂಬಲ ಕೊಟ್ಟಿದ್ದಾರೆ. ಇಂದು ಕೇವಲ ಎಂಟು ಸ್ವಾಮೀಜಿಗಳು ಬಂದಿದ್ದಾರೆ ಎಂದರು.
ಮೋಹನ್ ಲಿಂಬಿಕಾಯಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು, ಲಿಂಬಿಕಾಯಿ ಒಂದು ಕಾಗದದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರುಸಾವಿರ ಮಠಕ್ಕೆ ಸಂಬಂಧ ಏನು ಎಂಬುದನ್ನು ಹೇಳುತ್ತದೆ. ನನಗೂ ಮೂರುಸಾವಿರ ಮಠಕ್ಕೆ ಏನು ಸಂಬಂಧ ಎಂಬುದಕ್ಕೆ ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳುತ್ತಾರೆ. ಆದರೆ ನಾನು 2 ಕೋಟಿ ರೂಪಾಯಿ ಭಿಕ್ಷೆ ಬೇಡಿ ನಿಮಗೆ ಕೊಡುತ್ತೇನೆ. ಮೂರುಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟು ಕೊಡಿ ಎಂದರು.