ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ 35 ವರ್ಷಗಳ ಹಿಂದೆಯೇ ಮೂರು ಸಾವಿರ ಮಠದ ಆಸ್ತಿ ನೀಡಲಾಗಿದೆ. ಈ ಹಿಂದಿನ ಸ್ವಾಮೀಜಿಗಳು ಆಸ್ತಿ ಬಿಟ್ಟು ಕೊಟ್ಟಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಪ್ರತಿ ಹೆಜ್ಜೆಯಲ್ಲಿ ತಪ್ಪುತ್ತಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಅವರು ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಮೂರುಸಾವಿರ ಮಠಕ್ಕೆ ಅವರೇ ಮುಂದಿನ ಸ್ವಾಮೀಜಿ ಎಂದು ಮೂಜಗು ಶ್ರೀಗಳು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಬಾಲೆಹೊಸೂರು ಮಠದ 1 ಕೋಟಿ 30 ಲಕ್ಷ ರೂ. ಹಣವನ್ನು ಮೂರು ಸಾವಿರ ಮಠಕ್ಕೆ ಖರ್ಚು ಮಾಡಿದ್ದೇನೆ ಎನ್ನುತ್ತಿದ್ದಾರೆ. ಆ ಮಠದ ಹಣವನ್ನ ಈ ಮಠಕ್ಕೆ ಖರ್ಚು ಮಾಡುವ ಅಧಿಕಾರವನ್ನು ದಿಂಗಾಲೇಶ್ವರ ಶ್ರೀಗಳಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ನೀವು 100 ಕೋಟಿ ರೂ. ಕೊಟ್ಟುಬಿಡಿ : ಕೆಎಲ್‌ಇ ಸಂಸ್ಥೆಗೆ ನೀಡಲಾದ ಮೂರು ಸಾವಿರ ಮಠದ ಭೂಮಿಯ ಬೆಲೆ ₹40 ಲಕ್ಷ ಆಗುತ್ತದೆ. ದಿಂಗಾಲೇಶ್ವರ ಶ್ರೀಗಳು ₹500 ಕೋಟಿ ಎಂದು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ನಾ ಇವತ್ತು ಕೇಳುತ್ತಿದ್ದೇನಿ, ನೀವು ₹100 ಕೋಟಿ ಕೊಟ್ಟುಬಿಡಿ.
ಮಠದ ಆಸ್ತಿಯನ್ನ ಮಠಕ್ಕೆ ನಾನು ಬಿಟ್ಟು ಕೊಡಿಸುತ್ತೇನೆ. ಮೂರು ಸಾವಿರ ಮಠದ ಸ್ವಾಮೀಜಿಗಳಿಗೆ ಮತ್ತು ಪ್ರಭಾಕರ್ ಕೋರೆಯವರಿಗೆ ರಿಕ್ವೆಸ್ಟ್ ಮಾಡಿ ಆಸ್ತಿ ಬಿಡಿಸಿಕೊಡುತ್ತೇನೆ. ಈ ಇಬ್ಬರು ಸ್ವಾಮೀಜಿಗಳು ಒಂದು ನಿರ್ಣಯ ತೆಗೆದುಕೊಳ್ಳಬೇಕು. ಇದಕ್ಕೆ ನಮ್ಮ ಸಮಾಜವೂ ಒಪ್ಪುತ್ತದೆ, ಅಂದಾಗ ಮಾತ್ರ ಮೂರು ಸಾವಿರ ಮಠದ ಆಸ್ತಿ ವಿವಾದ ಅಂತ್ಯವಾಗಲು ಸಾಧ್ಯ ಎಂದರು.
ಆಡಳಿತ ನಡೆಸಲು ಮೂಜಗು ಶ್ರೀ ವಿಫಲ : ಮೂಜಗು ಶ್ರೀಗಳು ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಶ್ರೀಗಳು ಯಾವುದೇ ಭಕ್ತರ ಕೈಗೆ ಸಿಗುತ್ತಿಲ್ಲ. ಭಕ್ತರ ಜೊತೆ ನಿಂತು ಮಾತನಾಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ ಎಂದು ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬೇಸತ್ತು ರಾಜೀನಾಮೆ ನೀಡಿದ್ದೇನೆ : ದಿಂಗಾಲೇಶ್ವರ ಶ್ರೀಗಳನ್ನ ಪೀಠಾಧಿಪತಿ ಮಾಡಲು ಮೂಜಗು ಶ್ರಿಗಳು ಒಪ್ಪಿಗೆ ಸೂಚಿಸಿದ್ದರು. ನಾನು ಉನ್ನತ ಮಟ್ಟದ ಸಮಿತಿಯಲ್ಲಿರುವಾಗ ಮಠದ ಅಭಿವೃದ್ಧಿ ಬಗ್ಗೆ ಸಭೆ ನಡೆಸಿ ಎಂದಾಗ ಯಾರೂ ಮುಂದೆ ಬರಲಿಲ್ಲ. ಈ ಸ್ವಾಮೀಜಿಗಳು ಯಾವಾಗ ನೋಡಿದರೂ ಅಳ್ತಾನೆ ಇದ್ದರು.
ಸ್ವಾಮೀಜಿಗಳು ಸಾಲದ ಬಗ್ಗೆ ದೊಡ್ಡ ದೊಡ್ಡ ಲಿಸ್ಟ್ ಕೊಡ್ತಿದ್ದರು. ಇದರಿಂದ ನಾ ಬೇಸತ್ತು ಉನ್ನತ ಮಟ್ಟದ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಲ್ಲಿಂದ ಈವರೆಗೂ ಆ ಮಠಕ್ಕೆ ಕಾಲಿಟ್ಟಿಲ್ಲ, ನಾನು ಮಠದ ಭಕ್ತ ಅಷ್ಟೇ.. ಎಂದು ತಿಳಿಸಿದರು.
ದಿಂಗಾಲೇಶ್ವರ ಶ್ರೀಗಳಿಗೆ ಭಾಷೆ ಮೇಲೆ ಹಿಡಿತ ಬೇಕು : ದಿಂಗಾಲೇಶ್ವರ ಶ್ರೀಗಳು ಕೀಳುಮಟ್ಟದ ರಾಜಕಾರಣಿಗಳು ಎನ್ನುತ್ತಿದ್ದಾರೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು ನಾವಲ್ಲ, ಮೂಜಗು ಶ್ರೀಗಳೇ ಒತ್ತಾಯ ಪೂರ್ವಕ ಸಮಿತಿ ರಚನೆ ಮಾಡಿದ್ದರು.
ಇವತ್ತು ಕಾವಿಧಾರಿಗಳು ಮಾತನಾಡುವುದನ್ನ ಕಲಿಬೇಕಾಗಿದೆ. ಜವಾಬ್ದಾರಿಯುತವಾಗಿ, ಕೆಟ್ಟ ಭಾಷೆಗಳನ್ನ ಬಳಸದೆ ಮಾತನಾಡಬೇಕು. ಸಿಎಂಗೂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ, ನಮ್ಮಿಂದ ಸರ್ಕಾರ, ಸರ್ಕಾರ ಕೆಡವುತ್ತೇವೆ ಎನ್ನುತ್ತಿರುವುದು ಸರಿಯಲ್ಲ ಎಂದರು.