ಹುಬ್ಬಳ್ಳಿ: ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರ ಭಾವಚಿತ್ರಗಳು, ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನ ಮಧ್ಯೆ ಹೊಳೆಯುವ ನುಡಿಮುತ್ತುಗಳ ಸಾಲುಗಳು, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು...
ಹುಬ್ಬಳ್ಳಿಯ ರೆಸ್ಟೋರೆಂಟ್ನ ಮಾಲೀಕರ ವಿಭಿನ್ನ ಪ್ರಯೋಗವಿದು. ಇಲ್ಲಿ ಗ್ರಾಹಕರಿಗೆ ರುಚಿರುಚಿಯಾದ ಆಹಾರದ ಜೊತೆಜೊತೆಗೆ ದೇಶಭಕ್ತಿಯನ್ನೂ ಉಣಬಡಿಸಲಾಗುತ್ತಿದೆ.
ವಿದ್ಯಾನಗರದಲ್ಲಿರುವ ಪಂಜುರ್ಲಿ ರೆಸ್ಟೋರೆಂಟ್ನಲ್ಲಿ ಇವು ನಿಮಗೆ ಕಾಣಸಿಗುತ್ತವೆ. ಇಲ್ಲಿನ ಪ್ರತೀ ಗೋಡೆಯೂ ದೇಶಪ್ರೇಮದ ಪರಿಕಲ್ಪನೆಯಲ್ಲಿ ಅದ್ಭುತವಾಗಿ ಚಿತ್ತಾರಗೊಂಡಿವೆ. ಊಟ, ತಿಂಡಿಯ ಜೊತೆಗೆ ನೈತಿಕ ಮೌಲ್ಯಗಳನ್ನೂ ಜಾಗೃತಗೊಳಿಸುವ ಪ್ರಯತ್ನದಲ್ಲಿ ಈ ರೆಸ್ಟೋರೆಂಟ್ ಯಶಸ್ವಿಯಾಗಿದೆ.
ಅದೆಷ್ಟೋ ದೇಶಭಕ್ತರು, ಹುತಾತ್ಮರ ಭಾಚಿತ್ರಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಊಟದ ಜೊತೆಗೆ ಜ್ಞಾನವೂ ಸಿಗುತ್ತೆ. ದೇಶ ಪ್ರೇಮವೂ ಹೆಚ್ಚಾಗುತ್ತೆ. ಮತ್ತೆ ಇದೇ ಹೋಟೆಲ್ಗೆ ಬರುವಂತೆ ಮಾಡುತ್ತೆ ಅಂತಾರೆ ರೆಸ್ಟೋರೆಂಟ್ನಲ್ಲಿದ್ದ ಗ್ರಾಹಕರೊಬ್ಬರು.
ಗ್ಲಾಸ್ ಪೇಂಟಿಂಗ್ನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಮಹಾತ್ಮ ಗಾಂಧಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಸಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಸರ್ ಎಂ ವಿಶ್ವೇಶ್ವರಯ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಹುತಾತ್ಮ ಯೋಧ ಮೇ. ಸಂದೀಪ ಉನ್ನಿಕೃಷ್ಣನ್, ಗಗನಯಾತ್ರಿ ಕಲ್ಪನಾ ಚಾವ್ಲಾ, ವರನಟ ಡಾ.ರಾಜಕುಮಾರ್ ಹೀಗೆ ತಲಾ 16 ಸಾವಿರ ಮೊತ್ತದ 14 ಭಾವಚಿತ್ರಗಳು ಇಲ್ಲಿವೆ.
ಗೋಡೆಯ ಇಕ್ಕೆಲ ಮತ್ತು ಮೇಲ್ಛಾವಣಿಗೆ ಜೋಡಿಸಿದ ಕನ್ನಡಿಯ ಮೇಲೆ ನುಡಿಮುತ್ತುಗಳನ್ನ ಬರೆಸಲಾಗಿದೆ. ವಿದ್ಯುತ್ ದೀಪದ ಬೆಳಕಿನಲ್ಲಿ ಈ ಬರಹಗಳು ವರ್ಣಮಯವಾಗಿ ರಾರಾಜಿಸುತ್ತವೆ. ಇಲ್ಲಿರುವ 50ಕ್ಕೂ ಅಧಿಕ ವಾಕ್ಯಗಳು ಜನರಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿವೆ. ಪ್ರತೀ ಟೇಬಲ್ ಡಿವೈಡರ್ ಮೇಲೆ ಸತ್ಯ ಮೇವ ಜಯತೆ ಮತ್ತು ಜೈ ಜವಾನ್ ಜೈ ಕಿಸಾನ್ ಎಂದು ಬರೆಸಲಾಗಿದ್ದು, ಗಮನ ಸೆಳೆಯುತ್ತವೆ. ಇಷ್ಟಲ್ಲದೆ, ಮಾನವನ ನಾಗರಿಕತೆ ಬಿಂಬಿಸುವ ಭತ್ತದ ನಾಟಿ ಮಾಡುವ ಶೈಲಿ ಹಾಗೂ ಕಂಬಳದ ಚಿತ್ರಗಳು ಮನಸೆಳೆಯುತ್ತವೆ.
ಧಾರವಾಡ ಮತ್ತು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಪಂಜುರ್ಲಿ ರೆಸ್ಟೋರೆಂಟ್ಗಳಲ್ಲೂ ಇದೇ ಪ್ರಯೋಗವನ್ನು ಮಾಡಲಾಗಿದ್ದು, ಪ್ರಸಿದ್ಧ ಆಟಗಾರರ ಚಿತ್ರಗಳನ್ನೂ ಬಿಡಿಸಲಾಗಿದೆ. ಇದು ಗ್ರಾಹರಿಕರನ್ನು ಸೆಳೆಯುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ರೆಸ್ಟೋರೆಂಟ್ನಲ್ಲಿ ಊಟ ತಿಂಡಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕ ರಾಜೇಂದ್ರ ಶೆಟ್ಟಿ.
ಜನರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸಿದಾಗಲೇ ದೇಶ ಅಭಿವೃದ್ಧಿಯಾಗುತ್ತೆ. ಈ ಹಿನ್ನೆಲೆಯಲ್ಲಿ ಈ ರೆಸ್ಟೋರೆಂಟ್ ನವೀಕರಣಕ್ಕೆ ಬರೊಬ್ಬರಿ 70 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಕೇವಲ ಆಹಾರ ಒದಗಿಸುವುದಷ್ಟೇ ಅಲ್ಲದೇ, ಅದರೊಟ್ಟಿಗೆ ದೇಶಭಕ್ತಿಯನ್ನೂ ಉಣಬಡಿಸುವ ಮೂಲಕ ರೆಸ್ಟೋರೆಂಟ್ ಈಗ ವಿದ್ಯಾನಗರ ಜನತೆಯ ಫೆವರೇಟ್ ಆಗಿದೆ.