ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಂದಗೋಳ ತಾಲೂಕಿನ ನೆರೆ ಸಂತ್ರಸ್ತರು ಅರೆಬೆತ್ತಲೆಯಾಗಿ ವಿನೂತನವಾಗಿ ಪ್ರತಿಭಟನೆ ಮಾಡಿದರು.
ನರಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಮಾತನಾಡಿದ ಹೋರಾಟಗಾರ ಮುತ್ತಣ್ಣ ಶಿವಳ್ಳಿ, ಕಳೆದ ಕೆಲವು ತಿಂಗಳಿಂದ ಸುರಿದ ಭಾರಿ ಮಳೆಯಿಂದಾಗಿ ಇಡೀ ರಾಜ್ಯ ಕತ್ತಲೆಯಲ್ಲಿದೆ. ರಾಜ್ಯದ ಸುಮಾರು 18 ಜಿಲ್ಲೆಗಳ ಜನರು ನೆರೆಹಾವಳಿ ಪ್ರವಾಹ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.
ಈ ಭೀಕರ ನೆರೆ ಹಾವಳಿಯಿಂದ ರಾಜ್ಯಾದ್ಯಂತ ವಿವಿಧ ಸಮೀಕ್ಷೆಯಂತೆ 2 ಲಕ್ಷ ಮನೆಗಳು ಹಾನಿಗೊಳಗಾಗಿವೆ. 30 ಸಾವಿರ ಕುಟುಂಬಗಳ ಕೃಷಿ ಭೂಮಿ ನೀರು ಪಾಲಾಗಿದೆ. ಭೂಮಿ ಭೂ ಕೊರೆತಕ್ಕೊಳಗಾಗಿ ಕೃಷಿಗೆ ಯೋಗ್ಯವಿಲ್ಲದಂತಾಗಿದೆ. ಸಾವಿರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಅಪಾರ ಪ್ರಮಾಣದ ಪಶು ಸಂಪತ್ತು ನಾಶವಾಗಿದ್ದವು. ಅದರಂತೆ ಕುಂದಗೋಳ ತಾಲೂಕಿನಲ್ಲಿ 10 ಸಾವಿರ ಮನೆಗಳು, 10 ಸಾವಿರ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಮಾತ್ರ ಪರಿಹಾರ ಒದಗಿಸುವಲ್ಲಿ ಹಾಗೂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಮುತ್ತಣ್ಣ ಶಿವಳ್ಳಿ ಆರೋಪಿಸಿದರು.
ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. ಇನ್ನೂ ಕೃಷಿ ಉಪಕರಣ, ಗೃಹ ವಸ್ತುಗಳು, ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು, ಮೇವು, ಚಕ್ಕಡಿ, ಟ್ರ್ಯಾಕ್ಟರ್‌ಗಳು ಹಾನಿಗೀಡಾಗಿವೆ. ಭಾರಿ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ, ಶಾಲಾ ಕಟ್ಟಡ, ರಸ್ತೆಗಳು, ಸೇತುವೆಗಳು, ಸರ್ಕಾರದ ಹಾಗೂ ಸಾರ್ವಜನಿಕರ ಆಸ್ತಿಗಳು ದೊಡ್ಡ ಪ್ರಮಾಣದಲ್ಲಿ ಪ್ರವಾಹಕ್ಕೆ ತುತ್ತಾಗಿ ನಾಶವಾಗಿದ್ದು, ಕೂಡಲೇ ಸರ್ಕಾರ ಕುಂದಗೋಳ ತಾಲೂಕಿನ ನೆರೆಸಂತ್ರಸ್ಥರಿಗೆ ತಾರತಮ್ಯ ಮಾಡದೇ ಪರಿಹಾರ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು.