ಧಾರವಾಡ : ಎಸ್ಪಿ ಕೃಷ್ಣಕಾಂತ ಹಾಗೂ ಡಿವೈಎಸ್ಪಿ ಎಂ ಬಿ ಸಂಕದ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆಯಿಂದ ತಪಾಸಣೆ ನಡೆಸಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ನಿಗದಿ, ನರೇಂದ್ರ, ಹಾರೂಬೆಳವಡಿ, ಹೆಬ್ಬಳ್ಳಿ ಮತ್ತು ಅಮ್ಮಿನಬಾವಿ ಗ್ರಾಮಗಳಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿ ಸುಮಾರು 70ಕ್ಕೂ ಹೆಚ್ಚು ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ತಪಾಸಣೆ ಮಾಡುತ್ತಿದ್ದಾರೆ.
ನಾಳೆಯಿಂದ ತಪಾಸಣೆಯನ್ನು ಇನ್ನು ಕಠಿಣಗೊಳಿಸಲಾಗುವುದು ಮತ್ತು ಈಗ ವಶಪಡಿಸಿಕೊಂಡಿರುವ ಹಾಗೂ ಇನ್ನು ಮುಂದಿನ ದಿನಗಳಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ವಾಹನಗಳನ್ನು ಮೇ 24ರ ಲಾಕ್‌ಡೌನ್ ಮುಗಿಯುವವರೆಗೆ ಮರಳಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರ ಆರೋಗ್ಯ ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಕರ್ಫ್ಯೂ ಹಾಗೂ ಲಾಕ್‌ಡೌನ್ ನಿಯಮಗಳನ್ನು ತಪ್ಪದೆ ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಜನರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ, ನಿಯಮ ಉಲ್ಲಂಘಿಸಿ ಅನಗತ್ಯ ಸಂಚರಿಸುವ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.